ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ ವಿರುದ್ಧ ಲೋಕಾಯುಕ್ತರಿಗೆ ದೂರು
ತರೀಕೆರೆ: ಮಿನಿ ವಿಧಾಸಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಬಾಡಿಗೆಗೆ 3 ವರ್ಷ ಅವಧಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸುವುದನ್ನು ವಿರೋಧಿಸಿ ತಾ. ನಾಗರಿಕ ಹೋರಾಟ ಸಮಿತಿಯಿಂದ ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ ನೇತೃತ್ವದಲ್ಲಿ ತರೀಕೆರೆಗೆ ಆಗಮಿಸಿದ್ದ, ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ಶೇಖ್ಹುಸೇನ್ಗೆ ದಾಖಲೆ ಸಹಿತ ದೂರು ನೀಡಿದರು.
ಸಮಿತಿ ಪದಾಧಿಕಾರಿ ಮ್ಯಾಮ್ಕೋಸ್ ನಿರ್ದೇಶಕ ಆರ್.ದೇವಾನಂದ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಚ್.ಎಲ್.ರಮೇಶ್, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಸುರೇಶ್ ಚಂದ್ರ, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಜಯ್ಯಣ್ಣ, ಮಾಜಿ ಪುರಸಭಾಧ್ಯಕ್ಷ ಟಿ.ಆರ್.ನಾಗರಾಜ್ ಈ ಸಂದರ್ಭದಲ್ಲಿ ಇದ್ದರು.
ನೀಲಕಂಠಪ್ಪ ಮಾತನಾಡಿ, ಕಚೇರಿ ಸ್ಥಳಾಂತರಕ್ಕೆ ಸಾರ್ವಜನಿಕರ ತೀವ್ರ ವಿರೋಧ ಇದೆ, ಕಚೇರಿ ಸ್ಥಳಾಂತರ ಖಂಡಿತ ಕೂಡದು ಎಂದು ಒತ್ತಾಯಿಸಿದರು.ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಚ್.ಎಲ್.ರಮೇಶ್ ಮಾತನಾಡಿ ತಾಲೂಕು ಉಪ ವಿಭಾಗವಾಗಿದ್ದು, ಪಟ್ಟಣದಲ್ಲಿ ಒಂದೇ ಸೂರಿನಡಿ ಕಂದಾಯ ಇಲಾಖೆಗೆ ಸೇರಿದ ಕಚೇರಿಗಳು ಇರಬೇಕೆಂಬ ಸದುದ್ದೇಶದಿಂದ ಮತ್ತು ರೈತಾಪಿ ಜನರ ಅನುಕೂಲಕ್ಕೋಸ್ಕರ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ.
ಈ ಕಟ್ಟಡದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಸಹ ಇದೆ. ಆದರೆ ಕಚೇರಿ ಸ್ಥಳಾಂತರಿಸುವುದರಿಂದ ಕಚೇರಿಯಿಂದ ಕಚೇರಿಗೆ ಸಾರ್ವಜನಿಕರು ಅಲೆದಾಡಬೇಕಾಗುತ್ತದೆ. ಅಲ್ಲದೆ ಸ್ಥಳಾಂತರಿಸುವ ಕಟ್ಟಡ ಸರ್ಕಾರದ ಎಲ್ಲ ಆದೇಶ ಉಲ್ಲಂಘಿಸಿದೆ. ಪುರಸಭೆ, ಮೆಸ್ಕಾಂ ಇತ್ಯಾದಿಗಳ ಅಧಿಕೃತ ಅನುಮತಿಯನ್ನೇ ಪಡೆದಿಲ್ಲ.
ಮಿನಿ ವಿಧಾನ ಸೌಧದ ಪಕ್ಕದಲ್ಲೇ ಸಬ್ ರಿಜಿಸ್ಟ್ರಾರ್ ಕಚೇರಿ ನಿರ್ಮಿಸಲು ಮತ್ತು ಸಾರ್ವಜನಿಕರು ಬಂದು ಹೋಗಲು ವಿಶಾಲವಾದ ಸ್ಥಳಾವಕಾಶ ಇದೆ. ಎಂದು ಆಗ್ರಹಿಸಿದರು.
ಮ್ಯಾಮ್ಕೋಸ್ ನಿರ್ದೇಶಕ ದೇವಾನಂದ್ ಅವರು, ಕಚೇರಿ ಸ್ಥಳಾಂತರಿಸಿದರೆ ಜನರು ಕಚೇರಿಯಿಂದ ಕಚೇರಿಗೆ ವೃಥಾ ಅಲೆದಾಡ ಬೇಕಾಗುತ್ತದೆ. ಈಗಿರುವ ಸ್ಥಳದಿಂದ ಕಚೇರಿ ಸ್ಥಳಾಂತರಿಸಲು ಅವಕಾಶ ನೀಡ ಕೂಡದು ಎಂದು ತಿಳಿಸಿದರು. ಡಿವೈಎಸ್ಪಿ ಶೇಖ್ ಹುಸೇನ್ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.