ಕೊಪ್ಪ ತಾಲೂಕಿನಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ
ಕೊಪ್ಪ: ತಾಲೂಕಿನ ಎಲ್ಲೆಡೆ ಪುನರ್ವಸು ಮಳೆ ಸಮೃದ್ಧವಾಗಿ ಸುರಿದಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಕೃಷಿ ಇಲಾಖೆ ಅಲ್ಪಾವಧಿ ತಳಿಗಳ ಬಳಕೆಗೆ ಸಲಹೆ ಮಾಡುತ್ತಿದ್ದು, ಕೃಷಿಕರು ಲಭ್ಯವಿರುವ ಪಿ.ಇ.ಟಿ ಇಂಟಾನ್ಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ತುಂಗಾ ಹಾಗೂ ಬಾಂಗ್ಲಾ ರೈಸ್ ತಳಿ ಬಿತ್ತನೆ ಬೀಜದ ಸಸಿಮಡಿಗಳು ಸಿದ್ದಗೊಂಡಿವೆ.
ಮುಂಗಾರು ವಿಳಂಬದಿಂದ ಬತ್ತದ ಕೃಷಿ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದನ್ನು, ಗಮನಿಸಿದ ಕೃಷಿ ಇಲಾಖೆ, ಒಣ ಬೇಸಾಯ ಕ್ರಮಗಳ ಬಗ್ಗೆಯೂ ರೈತರಿಗೆ ಮಾಹಿತಿ ನೀಡಿತ್ತು. ಮಳೆನಾಡು ಭಾಗದಲ್ಲಿ ಮೊಟ್ಟಮೊದಲ ಬಾರಿಗೆ ಹರಂದೂರಿನ ವರ್ಗೀಸ್ ಕೃಷಿ ಕ್ಷೇತ್ರದಲ್ಲಿ ಕೂರಿಗೆ ಬಿತ್ತನೆ ಕೈಗೊಂಡಿತ್ತು.
ಈ ಇಲಾಖೆ ಈ ಬಾರಿ 6 ಹೊಸ ಬತ್ತದ ತಳಿಗಳನ್ನು ತಾಲೂಕಿಗೆ ಪರಿಚಯಿಸಿದೆ.
ರೋಗ ನಿರೋಧಕ: ದಪ್ಪ ಕೆಂಪಕ್ಕಿಯ ಬೆಂಕಿರೋಗ ನಿರೋಧಕ ಹೆಚ್ಚು ಇಳುವರಿ. ಈ ತಳಿಗಾಗಿ 9 ರೈತರನ್ನು ಆಯ್ಕೆ ಮಾಡಲಾಗಿದ್ದು, ಸಾಲುನಾಟಿ, ಯಾಂತ್ರಿಕ ನಾಟಿ ಹಾಗೂ ಸಾಂಪ್ರದಾಯಿಕ ನಾಟಿ ಪದ್ಧತಿಯಲ್ಲಿ ಬೇಸಾಯ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಕೃಷಿ ಅಧಿಕಾರಿ ಸವಿತಾ ತಿಳಿಸಿದ್ದಾರೆ.
ಹೊಸ ತಳಿಗಳಾದ ಶರಾವತಿ ಕೆ.ಎಚ್.ಪಿ. 10.ಐ.ಇ.ಟಿ 7191,ತುಂಗಾ ಕೆ.ಎಚ್.ಪಿ. 2, ಐ.ಇ.ಟಿ 2178 ಕೆ.ಎಚ್.ಪಿ. 5 ಹೊಸತಳಿಗಳಾಗಿ ಪರಿಚಯಿಸಲಾಗುತ್ತಿದೆ. ಕಳೆದ ಸೋಮವಾರ ಈ ವರ್ಷದ ಅಧಿಕ ಮಳೆ ದಾಖಲಾಗಿದೆ. ಕಸಬಾದಲ್ಲಿ 150.2 ಮಿ.ಮಿ, ಹರಿಹರಪುರ 185.4 ಮಿ.ಮಿ, ಜಯಪುರದಲ್ಲಿ 124.4 ಮಿ.ಮಿ. ಅಂದು ಮಳೆಯಾಗಿದೆ. ತಾಲೂಕಿನಲ್ಲಿ ರಾತ್ರಿಯಿಡಿ ಅಬ್ಬರಿಸಿದ ಮಳೆ ಬುಧವಾರ ಬೆಳಗ್ಗೆ ಕೊಂಚ ತಗ್ಗಿ, ಸಂಜೆ ವೇಳೆಗೆ ಮತ್ತೆ ಅಬ್ಬರಿಸಿದೆ. ಮಳೆಯೊಂದಿಗೆ ಗಾಳಿ ರಭಸ ಜೋರಾಗಿರುವುದರಿಂದ ವಿದ್ಯುತ್ ಕಂಬಗಳು ಧಾರೆಗೆ ಉರುಳಿ ವಿದ್ಯುತ್ ಸಮಸ್ಯೆ ಉಂಟಾಗಿದೆ.