ಮಳೆಗೆ ಮೈದುಂಬಿದ ಜಲಪಾತ
ಮೂಡಿಗೆರೆ: ಕಳೆದ 3-4 ದಿನಗಳಿಂದ ಪುನರ್ವಸು ಮಳೆ ಎಡೆಬಿಡದೆ ಸುರಿಯುತ್ತಿರುವುದರಿಂದ ಹೇಮಾವತಿ ಮೈದುಂಬಿ ಹರಿಯುತ್ತಿದೆ.
ಗದ್ದೆಗಳು ಜಲಾವೃತಗೊಂಡಿವೆ. ಕೆಲವಡೆ ಗುಡ್ಡ ಕುಸಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡರೆ ಚಾರ್ಮಡಿ ಘಾಟಿ ರಸ್ತೆಯಲ್ಲಿ ಮಂಜಿನ ವಾತವಾರಣವಿದ್ದು, ಜಲಪಾತಗಳು ಮನಸೂರೆಗೊಳ್ಳುತ್ತಿದೆ. ತಾಲೂಕಿನ ಬಣಕಲ್ ಅರವಿನಕೆರೆ ಎಂಬಲ್ಲಿ ಮಣ್ಣಿನ ಗುಡ್ಡ ಜರುಗಿದ್ದು ಸಂಚಾರ ಸ್ಥಗಿತಗೊಂಡಿತ್ತು. ಜೆಸಿಬಿ ಸಹಾಯದಿಂದ ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಯಿತು.
ಪಟ್ಟಣದ ಕುರುಕ್ ಮಕ್ಕಿ ರಸ್ತೆಯಲ್ಲಿರುವ ತಿಮ್ಮಣ್ಣಶೆಟ್ಟರ ಮನೆಮೇಲೆ ಮರವೊಂದು ಉರುಳಿದ್ದು. ಮನೆಯಲ್ಲಿ ವಾಸವಾಗಿದ್ದ ಎಚ್.ಪಿ. ಮಂಜುನಾಥ್ ಆಚಾರ್ ಮತ್ತು ಕುಟುಂಬದವರು ಪಾರಾಗಿದ್ದಾರೆ. ಬಿದರಹಳ್ಳಿ-ಹೊರಟ್ಟಿ ನಡುವೆ ರಸ್ತೆ ಬದಿಯಲ್ಲಿದ್ದ ಗದ್ದೆಗಳು ನೀರಿನಲ್ಲಿ ಮುಳುಗಿ ಹೋಗಿದ್ದವು.
ಮೂಡಿಗೆರೆ ಪಟ್ಟಣದಲ್ಲಿ 111.7 ಮಿ.ಮೀಟರ್, ಕೊಟ್ಟಿಗೆಹಾರ 186 ಮಿ.ಮೀ, ಗೋಣಿಬೀಡು 66 ಮಿ.ಮೀಟರ್, ಜಾವಳಿ 62 ಮಿ.ಮೀಟರ್, ಕಳಸ 117 ಮಿ.ಮೀಟರ್ ಮಳೆಯಾಗಿದೆ.