ಅಂಡರ್ಪಾಸ್ ನಿರ್ಮಾಣಕ್ಕೆ ಅನುದಾನ: ಶ್ಲಾಘನೆ
ಕಡೂರು: ಮಾಜಿ ಪ್ರಧಾನಿ ದೇವೇಗೌಡರು, ಶಾಸಕ ವೈಎಸ್ವಿ ದತ್ತ ಅವರ ಹೋರಾಟದ ಫಲವಾಗಿ ತಾಲೂಕಿನ ಕಂಸಾಗರ ಬಳಿ ರೈಲ್ವೆ ಅಂಡರ್ಪಾಸ್ ನಿರ್ಮಾಣಕ್ಕಾಗಿ 6.35 ಕೋಟಿ ಮಂಜೂರಾಗಿದೆ ಎಂದು ಜೆಡಿಎಸ್ ಹಿಂದುಳಿದ ವರ್ಗಗಳ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮಸ್ಥರು ಸಂಚರಿಸುವ ಕಂಸಾಗರ ರೈಲ್ವೆ ಗೇಟಿನ ಮುಖಾಂತರ ಪ್ರತಿದಿನ ರೈತರು ತಮ್ಮ ಜಮೀನುಗಳಿಗೆ ಎತ್ತಿನ ಗಾಡಿ ಮತ್ತು ದನಕರುಗಳನ್ನು ಹೊಡೆದುಕೊಂಡು ಹೋಗಲು ತೊಂದರೆ ಅನುಭವಿಸುತ್ತಿದ್ದರು. ಗೇಟನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದರಿಂದ ದನಕರುಗಳು ರೈಲಿಗೆ ಸಿಲುಕಿ ಅಸುನೀಗುತ್ತಿದ್ದವು. ಅಂಡರ್ಪಾಸ್ ನಿರ್ಮಾಣದಿಂದ ಈ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗುತ್ತದೆ ಎಂದಿದ್ದಾರೆ.