ಅರಣ್ಯ ಬೆಳೆಸಲು ಆದ್ಯತೆ ನೀಡಿ
ತರೀಕೆರೆ: ಹೆಚ್ಚು ಅರಣ್ಯ ಬೆಳೆಸುವತ್ತ ಎಲ್ಲರೂ ಒತ್ತು ಕೊಡಬೇಕೆಂದು ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜುರ್ ತಿಳಿಸಿದರು.
ಯಶಸ್ವಿ ಚಾರಿಟೆಬಲ್ ಟ್ರಸ್ಟ್, ಶ್ರೀಗಂಧ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಸಮೀಪದ ಬೇಲೇನಹಳ್ಳಿ ಗಂಧದ ಗುಡಿ ನಿವೇಶನಗಳಲ್ಲಿ ಶ್ರೀಗಂಧ ಸಸಿ ನೆಡುವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಮೂಲ್ಯವಾದ ಸಸ್ಯರಾಶಿ ಮತ್ತು ಉತ್ತಮ ತಳಿಗಳನ್ನು ಕಾಪಾಡಿಕೊಳ್ಳಬೇಕು, ಮಣ್ಣಿನ ಗುಣಮಟ್ಟ ನಿರ್ಧರಿಸಿ ಮರಗಿಡ ಬೆಳೆಯಬೇಕು.ಶ್ರೀಗಂಧ ಬೆಳೆಸಲು ಮುಕ್ತ ಅವಕಾಶವಿದೆ ಎಂದು ತಿಳಿಸಿದರು.
ನೂತನ ಪ್ರಯೋಗ: ಶ್ರೀಗಂಧ ರಕ್ಷಣಾ ವೇದಿಕೆಯ ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಅವರು ಮಾತನಾಡಿ ವೇದಿಕೆ ವತಿಯಿಂದ ನಿವೇಶನಗಳಲ್ಲಿ ಶ್ರೀಗಂಧ ಬೆಳೆಸಿ ರಾಜ್ಯದಲ್ಲಿ ಒಂದು ಹೊಸ ಪ್ರಯೋಗವಾಗಿದೆ, ಇದೇ ರೀತಿಯಲ್ಲಿ ಸರ್ಕಾರ ಮಳೆ ಕೊಯ್ಲು ಮತ್ತು ನಿವೇಶನಗಳಲ್ಲಿ ಮರ ಗಿಡ ಬೆಳೆಸುವುದನ್ನು ಕಡ್ಡಾಯ ಮಾಡಿದರೆ ಅದರಿಂದ ಉತ್ತಮ ಪರಿಸರ ನಿರ್ಮಾಣ ಮಾಡಲು ಅನುಕೂಲವಾಗುತ್ತದೆ ಎಂದರು.
ಬೇಲೇನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಪೀರ್ಯಾನಾಯ್ಕ, ಯಶಸ್ವಿ ಚಾರಿಟೇಬಲ್ ಗೌರವ ಅಧ್ಯಕ್ಷ ಟಿ.ಆರ್.ನಾಗರಾಜ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬೇಲೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಗಿರಿಜಮ್ಮ ಆನಂದ್, ಮಾಜಿ ಪುರಸಭಾಧ್ಯಕ್ಷೆ ಗಿರಿಜಮ್ಮ ನಾಗರಾಜ್, ಆನಂದ್, ಮಂಜುನಾಥ್ ಪ್ರಸಾದ್, ಟಿ.ಎಸ್.ಶಾಂತರಾಜ್, ಜಯಣ್ಣ, ಟಿ.ಪಿ.ಮೋಹನ್, ಧರಣೇಶ್, ತಿಪ್ಪೇಶ್, ವಿಶ್ವನಾಧ್, ಎಸಿಎಫ್ ರೆಡ್ಡೇರ್, ಅರಣ್ಯಾಧಿಕಾರಿ ಶ್ರೀರಂಗಸ್ವಾಮಿ, ಶ್ರೀಗಂಧ ರಕ್ಷಣಾ ವೇದಿಕೆ ಸದಸ್ಯರು ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ನಿರೂಪಿಸಿದರು. ಗಂಧದಗುಡಿ ನಿವೇಶನಗಳಲ್ಲಿ ಶ್ರೀಗಂಧ ಸಸಿಗಳನ್ನು ನೆಟ್ಟು ಸಂರಕ್ಷಿಸಲಾಯಿತು.