ಗುರಿ ಸಾಧನೆಗೆ ನಿರಂತರ ಪ್ರಯತ್ನ ಅವಶ್ಯ: ಅಬ್ದುಲ್ ಸುಭಾನ್ ಅಭಿಮತ
ನರಸಿಂಹರಾಜಪುರ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟು ಅದನ್ನು ಸಾಕಾರಗೊಳಿಸಲು ನಿರಂತರ ಪ್ರಯತ್ನ ನಡೆಸಬೇಕು ಎಂದು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಅಬ್ದುಲ್ ಸುಭಾನ್ ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘ ಉದ್ಘಾಟಸಿ ಮಾತನಾಡಿದ ಅವರು, ಶಾಲೆಯ ಆವರಣಕ್ಕೆ ಇಂಟರ್‌ಲಾಕ್, ಶಾಲಾ ಕೊಠಡಿ ದುರಸ್ತಿ ಅಗತ್ಯವಾಗಿ ಆಗಬೇಕಿದೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯ್ತಿಯಿಂದ ಈ ಸೌಲಭ್ಯಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ನೂತನ ಪ್ರಾಂಶುಪಾಲ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಘಟನೆ ಜವಾಬ್ದಾರಿ ಮತ್ತು ಸಂಸದೀಯ ನಡವಳಿಕೆ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿ ಸಂಘಗಳನ್ನು ರಚಿಸಲಾಗುತ್ತದೆ. ಈ ಸಂಘಗಳಿಂದ ಕ್ರೀಡೆ, ಸಾಂಸ್ಕೃತಿಕ, ಆರೋಗ್ಯ ಆಹಾರ, ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಾಲಾ ಸಮಿತಿಯ ಸದಸ್ಯರಾದ ಪವಿತ್ರ, ತಾಜನ್ನೀಸಾ, ಪುಟ್ಟಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಚಂದ್ರಪ್ಪ, ಅಕ್ಷರ ದಾಸೋಹ ಯೋಜನೆಯ ಬಿ.ಜಿ. ಮಾಳಮ್ಮನವರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸರ್ವಮಂಗಳಮ್ಮ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರೌಢ ಶಾಲೆಯಲ್ಲಿ 20 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಎಂ.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢ ಶಾಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿಘ್ನೇಶ್ ಅವರನ್ನು ಅಭಿನಂದಿಸಲಾಯಿತು.