ಧಾರಾಕಾರ ಮಳೆ ಕುಸಿದ ಮನೆ
ಮೂಡಿಗೆರೆ: ಕಳೆದ ಒಂದು ವಾರದಿಂದ ಪುನರ್ವಸು ಮಳೆ ಚುರುಕುಗೊಂಡಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಮರಗಳು ಮತ್ತು ವಿದ್ಯುತ್ ಕಗಂಬಗಳಿ ಧರೆಗೆ ಉರುಳಿವೆ. ಕೆಲ ಗ್ರಾಮಗಳು ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲಲ್ಲಿ ಮುಳುಗಿವೆ. ತಾಲೂಕಿನ ಚಾರ್ಮಾಡಿ ಘಾಟಿಯ ಬಿದಿರುತಳ ಎಂಬಲ್ಲಿ ಸತೀಶ್ ಎಂಬುವರ ಮನೆ ಭಾರಿ ಮಳೆಯಿಂದಾಗಿ ಭಾಗಶಃ ಕುಸಿದಿದೆ. ತಾಲೂಕಿನ ಬಣಕಲ್ ಹೋಬಳಿಯ ಕೊಟ್ಟಿಗೆಹಾರ ಗ್ರಾಮ ಕಳೆದ 4 ದಿನಗಳಿಂದ ಕತ್ತಲಲ್ಲಿ ಮುಳುಗಿದೆ.
ತಾಲೂಕಿನ ಪ್ರಸಿದ್ಧ ಕ್ಷೇತ್ರಗಳಾದ ಕಳಸ ಮತ್ತು ಹೊರನಾಡಿನಲ್ಲಿ ಭಕ್ತರು ತಂಡೋಪತಂಡವಾಗಿ ಆಗಮಿಸಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ದೇವರ ದರ್ಶನ ಪಡೆಯುತ್ತಿದ್ದಾರೆ. ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲ ಭಾಗಗಳಿಂದ ವಿದ್ಯಾರ್ಥಿಗಳು ಹಳ್ಳವನ್ನು ದಾಟಿ ಬರಬೇಕಾಗಿದೆ. ಮಳೆರಾಯನ ಆರ್ಭಟದಿಂದ ಶಾಲೆಗೆ ಬರಲು ಮತ್ತು ಶಾಲೆಯಿಂದ ಮನೆಗೆ ಹೋಗಲು ವಿದ್ಯಾರ್ಥಿಗಳು ತೋಳಲಾಟದಲ್ಲಿ ಸಿಲುಕಿದ್ದಾರೆ.