ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಳಸಾಪುರದಲ್ಲಿ ಸ್ವಯಂಪ್ರೇರಿತ ಬಂದ್

Rashmi Kasaragodu
Updated On : 19 Jul 2014, 11:23 am

ಚಿಕ್ಕಮಗಳೂರು: ಕರಗಡ ನೀರಿನ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಿ ನಡೆಸುತ್ತಿರುವ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದ್ದು ಶುಕ್ರವಾರ ಕಳಸಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲಾ ಕಾಲೇಜು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೀರಿನ ಬವಣೆ ನೀಗಿಸಲು ಆಗ್ರಹಿಸಿ ಖಾಲಿ ಕೊಡಗಳೊಂದಿಗೆ ಬಂದಿದ್ದ ಮಹಿಳೆಯರು ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಸಮರ್ಪಕವಾಗಿ ನೀರು ಸರಬರಾಜು ಮಾಡದ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಕಳಸಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ಮಹಿಳೆಯರು ಒಂದೊಂದು ಕೊಡ ನೀರು ತರಲು ಪರದಾಡುವಂತಹ ಸ್ಥಿತಿ ಉಂಟಾಗಿದೆ. ಮಳೆ ಅಭಾವದಿಂದ ಬೆಳೆ ಒಣಗುತ್ತಿದೆ. ಜಾನುವಾರುಗಳೂ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಸ್ ನಿಲ್ದಾಣ ಎದುರು ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಹೋರಾಟ ಸಮಿತಿ ಸಂಚಾಲಕ ಬಿ. ಅಮ್ಜದ್, ಎಚ್.ಎಂ .ರೇಣುಕಾರಾಧ್ಯ, ಗುರು ಶಾಂತಪ್ಪ ಎಚ್.ಕೆ.ಶಶಿಧರ್ ಮಾತನಾಡಿದರು. ಗ್ರಾಮಗಳ ಜನರೊಂದಿಗೆ ಬಹುತೇಕ ಎಲ್ಲ ಮುಖಂಡರು ಪಕ್ಷ ಬೇಧ ಮರೆತು ಚಳವಳಿಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸರಣಿ ಉಪವಾಸ:  ಕರಗಡ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಒತ್ತಾಯಿಸಿ ನಡೆಸುತ್ತಿರುವ ಹೋರಾಟದ 2ನೇ ಹಂತದ ಭಾಗವಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸರದಿ ಸತ್ಯಾಗ್ರಹ ಆರಂಭಗೊಂಡಿದೆ.
ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಸೀರ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರು ಸರದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಮುಖಂಡ ಎನ್.ಜಿ.ಧನಂಜಯಮೂರ್ತಿ, ವಿಜಯಕುಮಾರ್, ಕಲ್ಲಳ್ಳಿ ಪುಟ್ಟರಾಜು, ಶಿವನಂಜಪ್ಪ, ಎನ್.ಎಸ್.ಸುರೇಶ್,ಈಶ್ವರಪ್ಪ, ಪಾಲಾಕ್ಷ ಸೇರಿದಂತೆ ಹಲವರು ಸರದಿ ಉಪವಾಸ ಸತ್ಯಾಗ್ರಹದ ಮುಂದಾಳತ್ವ ವಹಿಸಿದ್ದಾರೆ.


'ಗಮಕ ಕಲೆ ಪರಿಣಾಮಕಾರಿ'


ತರಿಕೇರೆ ಗಮಕದ ಮೂಲಕ ಬೋಧನೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಗಮಕ ಕಲಾ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿದ್ದರಾಮಪ್ಪ ತಿಳಿಸಿದರು.
ಪಟ್ಟಣದ ಗಾಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಮಕ ವಾಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಮಕ ಕಲೆಯು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ, ಸಂಗೀತವು ಅವರಿಗೆ ಆನಂದ ಉಂಟುಮಾಡಿದರೆ, ವ್ಯಾಖ್ಯಾನವು ನೀತಿ ಬೋಧನೆ ಹಾಗೂ ಮಾರ್ಗದರ್ಶನ ಮಾಡುತ್ತದೆ. ಈ ನಿಟ್ಟಿನಲ್ಲಿ ಗಮಕ ಕಲಾ ಪರಿಷತ್ 8 ಮತ್ತು 10ನೇ ತರಗತಿಗಳಿಗೆ ಪಠ್ಯಾಧಾರಿತ ಗಮಕ ಕಾರ್ಯಕ್ರಮಗಳ ಮೂಲಕ ಸಾಹಿತ್ಯಾಸಕ್ತಿಯನ್ನೂ ಕಾವ್ಯದಲ್ಲಿ ಅಭಿರುಚಿ ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಿದೆ ಎಂದು  ತಿಳಿಸಿದರು.
ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಮಸುಬ್ರಾಯ ಶೇಟ್ ಮಾತನಾಡಿ ಪ್ರಾಚೀನ ಶಿಷ್ಟ ಕಲೆಯಾದ ಗಮಕವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ, ಮನೆ ಮನೆಗಳಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕನ್ನಡಶ್ರೀ ಬಿ.ಎಸ್.ಭಗವಾನ್ ಹಾಡಿದರು. ಮುಖ್ಯೋಪಾಧ್ಯಾಯ ಲಚ್ಚಾನಾಯಕ, ಶಿಕ್ಷಕರಾದ ಗಾಯತ್ರಿ ದೇವಿ, ಸತೀಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement