ಡಿಸಿಸಿ ಬ್ಯಾಂಕ್ನಲ್ಲಿ ರು. 1.79 ಕೋಟಿ ಗೋಲ್ಮಾಲ್
ಶಿವಮೊಗ್ಗ: ಡಿಸಿಸಿ ಬ್ಯಾಂಕ್ನಲ್ಲಿ ರು. 1.79 ಕೋಟಿ ಗೋಲ್ಮಾಲ್ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಶಿವಪ್ಪ ನಾಯಕ ವೃತ್ತದಲ್ಲಿರುವ ನಗರ ಶಾಖೆಯಲ್ಲಿ ಗ್ರಾಹಕರ ಹಣ ದುರುಪಯೋಗವಾಗಿದ್ದು, ಇದು ಜಿಲ್ಲೆಯ ಸಹಕಾರಿ ಕ್ಷೇತ್ರದ ಬ್ಯಾಂಕುಗಳಲ್ಲಿ ನಡೆದಿರುವ ಅತೀ ದೊಡ್ಡ ಹಗರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿ.ಎಚ್.ರಸ್ತೆಯ ಕಮಾಲಿಯ ಹೋಟೆಲ್ ಮೇಲ್ಭಾಗದಲ್ಲಿ ಇರುವ ನಗರ ಶಾಖೆಯಲ್ಲಿ ಈ ಹಗರಣ ನಡೆದಿದ್ದು, ವ್ಯವಸ್ಥಾಪಕಿ ಬಿ.ಶೋಭಾ ಹಾಗೂ ಕ್ಯಾಷಿಯರ್ ರವೀಂದ್ರ ಬ್ಯಾಂಕಿನ 1,79,20,235 ರುಪಾಯಿಯನ್ನು ವಂಚಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಾಗಭೂಷಣ ಅವರು ಶಿವಮೊಗ್ಗ ದೊಡ್ಡಪೇಟೆ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬ್ಯಾಂಕಿನಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಅನಾಮಧೇಯ ಪತ್ರದಲ್ಲಿ ಕೇಂದ್ರ ಕಚೇರಿಗೆ ಮಾಹಿತಿ ದೊರಕಿದೆ. ಈ ಬಗ್ಗೆ ಇದೇ ತಿಂಗಳ 7ರಿಂದ 15ರವರೆಗೆ ನಿರಂತರವಾಗಿ ಪರಿಶೀಲನೆ ಮಾಡಿದಾಗ ಈ ಹಗರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ವ್ಯವಸ್ಥಾಪಕಿ ಶೋಭಾ ಹಾಗೂ ಕ್ಯಾಷಿಯರ್ ರವೀಂದ್ರ ಅವರು ಪರಿಶೀಲನಾ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪ್ರಕರಣ ದಾಖಲಿಸಿ ಕೊಂಡಿರುವ ದೊಡ್ಡಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.