ಅತ್ಯಾಚಾರ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರಕ್ಕೆ ಮನವಿ: ಸಂಸದ ಯಡಿಯೂರಪ್ಪ
ಶಿವಮೊಗ್ಗ: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ರಾಜ್ಯ ಸರ್ಕಾರಕ್ಕೆ ಸರ್ವ ರೀತಿಯಲ್ಲೂ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡುವಂತೆ ಆಗ್ರಹಿಸಲಾಗಿದೆ. ಲೋಕಸಭೆಯಲ್ಲೂ ಈ ಪ್ರಕರಣಗಳ ಬಗ್ಗೆ, ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುವುದು ಎಂದು ಸಂಸದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹಲವಾರು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಮೃಗೀಯ ಸ್ವರೂಪದ ಅತ್ಯಾಚಾರದ ಸುದ್ದಿಗಳನ್ನು ಓದಿದಾಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕಾನೂನು ಕಾಪಾಡುವಲ್ಲಿ, ಜನರಲ್ಲಿ ವಿಶ್ವಾಸ ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಳೆದ ವಾರ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಆಘಾತಕಾರಿ ವಿಷಯವಾಗಿದೆ. ಇದಲ್ಲದೆ ಫ್ರೇಜರ್ ಟೌನ್ ಪ್ರಕರಣ, ಬೈಂದೂರಿನ ಶಂಕರ್ ಕೊಠಾರಿಯವರ ಪುತ್ರಿಯ ಪ್ರಕರಣ ಇಂತಹ ಅನೇಕ ಪ್ರಕರಣಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಹಾಗೂ ಕರ್ನಾಟಕ ದುರುಳರ ರಾಜ್ಯವಾಗಿ ಪರಿವರ್ತನೆ ಆಗಿರುವುದಕ್ಕೆ ನಿದರ್ಶನ ಎಂದಿದ್ದಾರೆ.
ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಂಡ ಅಪರಾಧಿಗಳ ಮೇಲೆ ತ್ವರಿತ, ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಮೊದಲಾಗಬೇಕಿಗೆ. ಠಾಣೆಗಳಲ್ಲಿ ದಾಖಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ಪ್ರಕರಣದ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕಾಗಿದೆ. ಈ ಅಂಕುಶವಿಲ್ಲದೆ ಅತ್ಯಾಚಾರಿಗಳಿಗೆ ಕಡಿವಾಣ ಹಾಕುವ ಬಹುದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ. ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಇಲಾಖೆ ಮುಕ್ತವಾಗಿ ಕಾನೂನು ಪ್ರಕಾರ ಸ್ವತಂತ್ರವಾಗಿ ಕೆಲಸ ಮಾಡಿ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತಾ ಭಾವ ಮೂಡಿಸುವುದು ಸದ್ಯದ ಕರ್ತವ್ಯ. ಇನ್ನು ಮುಂದಾದರೂ ಇಂತಹ ಪ್ರಕರಣಗಳು ಮರುಕಳಿಸದಂತೆ, ರಾಜ್ಯದ ಜನತೆಯಲ್ಲಿ ವಿಶ್ವಾಸ ಮರುಕಳಿಸುಂತಹ, ನಡೆದಿರುವ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಗೃಹ ಸಚಿವರಲ್ಲಿ ಆಗ್ರಹಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.