ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಖಾಲಿ ಸೈಟಿಗೆ ಶುಲ್ಕ ನೀತಿ ಜಾರಿ

Rashmi Kasaragodu
Updated On : 20 Jul 2014, 1:14 am

ಶಿವಮೊಗ್ಗ: ಜಿಲ್ಲಾಧಿಕಾರಿಯವರು ನಗರಸಭೆ ಆಡಳಿತಾಧಿಕಾರಿಯಾಗಿದ್ದಾಗ ಜಾರಿಗೆ ಬಂದಿದ್ದ ಖಾಲಿ ನಿವೇಶನಗಳಿಗೆ ಶುಲ್ಕ ವಿಧಿಸುವ ತೀರ್ಮಾನವನ್ನು ಭಾರೀ ಚರ್ಚೆ ಮಾಡಿ ವಾಪಸು ಪಡೆಯುವಂತೆ ಮಾಡಿದ್ದ ಮಹಾನಗರಪಾಲಿಕೆ ಸದಸ್ಯರು ಈಗ ಮತ್ತೆ ಹಿಂಬಾಗಿಲಿನಿಂದ ಜಾರಿ ಮಾಡಿದ್ದಾರೆ.
ವಿಚಿತ್ರವೆಂದರೆ ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಯಾವೊಬ್ಬ ಸದಸ್ಯರು ಒಂದೇ ಒಂದು ಮಾತೂ ಆಡಲಿಲ್ಲ. ಅಜೆಂಡಾ ಗಮನಿಸದೇ ಪಾಸು ಮಾಡಿದರು.
ಸಭೆಯ 49ನೇ ಕ್ರಮಸಂಖ್ಯೆ ಈ ಅಜೆಂಡಾವರೆಗೆ ಚರ್ಚೆಗೆ ಬರಲೇ ಇಲ್ಲ. 47ನೇ ವಿಷಯ ಚರ್ಚೆಗೆ ಬರುತ್ತಿದ್ದಂತೆ ಉಳಿದ ವಿಷಯಗಳಿಗೆ ಒಟ್ಟಿಗೇ ಒಪ್ಪಿಗೆ ಸೂಚಿಸಿ ಸದಸ್ಯರು ಸಭೆಯಿಂದ ಹೊರಬಂದರು.
ತೀರ್ಮಾನ ಹೀಗಿದೆ: ನಗರದ ಹೃದಯ ಭಾಗದಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಕಡ್ಡಿಗಳು ಹರಡಿ, ಗಿಡಗಳು ಬೆಳೆದು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ನಿವೇಸನ ಮಾಲೀಕರಿಂದ ಸ್ವಚ್ಛಗೊಳಿಸಲು ನೋಟಿಸ್ ನೀಡಬೇಕಾಗಿದೆ.
ಇದಕ್ಕೆ ನಿವೇಶನ ಮಾಲೀಕರು ಕ್ರಮ ವಹಿಸದಿದ್ದರೆ ಪಾಲಿಕೆಯಿಂದ ಸ್ವಚ್ಛಗೊಳಿಸಿ ತಗುಲುವ ವೆಚ್ಚವನ್ನು ಮಾಲೀಕರ ಖಾತೆಗೆ ವರ್ಗಾಯಿಸಲು ಹಾಗೂ ಶುಲ್ಕ ವಸೂಲಾತಿ ಮಾಡಲು, ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದಿದ್ದಲ್ಲಿ ಅಂತಹ ಶುಲ್ಕವನ್ನು ನಿವೇಶನ ವರ್ಗಾವಣೆ, ಕಟ್ಟಡ ಪರವಾನಿಗೆ ಕೋರಿ ಬಂದ ಸಂದರ್ಭದಲ್ಲಿ ಕಂದಾಯ ಶಾಖೆಯಿಂದ ಪರಿಶೀಲಿಸಿ ವಸೂಲಾತಿಗೆ ಕ್ರಮ ವಹಿಸಲಾಗುವುದು.
ಮಹಾಪೌರ ಖುರ್ಷಿದಾ ಭಾನು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.
ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಇದ್ದರು. ಉಪಮೇಯರ್ ರೇಖಾ ಚಂದ್ರಶೇಖರ್, ಆಯುಕ್ತ ಮೂಕಪ್ಪ ಕರಭೀಮಣ್ಣನವರ್ ಹಲವು ವಿಷಯಗಳಿಗೆ ಸಮಜಾಯಿಷಿ ನೀಡಿದರು.


ಚರ್ಚೆಗೆ ಬಂದ ವಿಷಯಗಳು


ಟಿ ಅಂಬೇಡ್ಕರ್ ಪ್ರತಿಮೆಯನ್ನು ಪಾಲಿಕೆ ಆವರಣದಲ್ಲಿ ಸ್ಥಾಪಿಸಲು ಆಕ್ಷೇಪಣೆ ಬಂದ ಹಿನ್ನಲೆಯಲ್ಲಿ   ಆಕ್ಷೇಪಿಸಿದವರೊಂದಿಗೆ ಸಭೆ ನಡೆಸಿ ಸ್ಥಳ ತೀರ್ಮಾನಿಸಲು ಮೇಯರ್‌ಗೆ ಅಧಿಕಾರ.
ಟಿ ಗ್ರಂಥಾಲಯ ಸಮಿತಿಗೆ ಗ್ರಂಥಾಲಯಗಳಿರುವ ವಾರ್ಡ್‌ಗಳ ಐವರು ಕಾರ್ಪೋರೇಟರ್‌ಗಳನ್ನೇ ಸದಸ್ಯರನ್ನಾಗಿ ನೇಮಿಸಲು ತೀರ್ಮಾನ.
ಟಿ ಪ್ರತಿ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ, ಬೀದಿ ದೀಪಕ್ಕೆ 5 ಲಕ್ಷ ಹಾಗೂ ಕುಡಿಯುವ ನೀರು ಯೋಜನೆಗೆ ಹಣ ಒದಗಿಸಲು ತೀರ್ಮಾನಿಸಲಾಯಿತು. ಗ್ರಾಮಾಂತರ ವಾರ್ಡ್‌ಗಳಿಗೆ ರು. 35 ಲಕ್ಷ  ನೀಡಲು ಒಪ್ಪಲಾಯಿತು.
ಟಿ ಆಡಿಟ್ ಆಕ್ಷೇಪಗಳ ಬಗ್ಗೆ ಪರಿಶೀಲಿಸಲು ವಿಶೇಷ ಸಭೆ ಕರೆಯಲು ತೀರ್ಮಾನ.
ಟಿ ತುಂಗಾ ನದಿ ದಡದಲ್ಲಿ ದೋಬಿ ಘಾಟ್ ನಿರ್ಮಿಸಲು ಒಪ್ಪಿಗೆ
ಟಿ ಗುತ್ತಿಗೆದಾರರಿಗೆ ನೀಡಿದ್ದ ಎರಡು ಚೆಕ್ ಎಸ್‌ಎಫ್‌ಸಿ ನಿಧಿ ಹಣವಿಲ್ಲದೇ ಬೌನ್ಸ್ ಆಗಿದ್ದ ಬಗ್ಗೆ ಸದಸ್ಯರ  ಆಕ್ರೋಶ.
ಟಿ ಬಸ್ ನಿಲ್ದಾಣ ಅಶೋಕ ವೃತ್ತ ಪೆಟ್ರೋಲ್ ಬಂಕ್ ಹಿಂಬದಿಯಲ್ಲಿ ಖಾಸಗಿಯವರು ಒತ್ತುವರಿ ಮಾಡಿ ನಿರ್ಮಿಸಿರುವ ಶೌಚಾಲಯ ತೆರವಿಗೆ ತೀರ್ಮಾನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement