ನಿವೇಶನ ರಹಿತರಿಗೆ ಸೌಲಭ್ಯ ಕಲ್ಪಿಸಲು ಒತ್ತಾಯ
ತರೀಕೆರೆ: ಇಲ್ಲಿಗೆ ಸಮೀಪದ ಉಡೇವ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಭಾಗ್ಯಮ್ಮ ಬಿ. ಮಂಜಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಗ್ರಾಮದ ಶಾಂತಿನಗರ ಬಡಾವಣೆಯಲ್ಲಿ ಹತ್ತು ವರ್ಷಗಳಿಂದ ವಾಸವಿರುವ ನಿವೇಶನ ರಹಿತರಿಗೆ ನಿವೇಶನದ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಹಾಗೂ ಈ ಪ್ರದೇಶದಲ್ಲಿ ಗುಡಿಸಲು ಹಾಗೂ ಮನೆ ನಿರ್ಮಿಸಿಕೊಂಡಿರುವ ನಿವೇಶನ ರಹಿತರ 43 ನಿವೇಶನಗಳಿಗೆ ತಾಲೂಕು ಪಂಚಾಯಿತಿಯಿಂದ ಈಗಾಗಲೇ ಅನುಮೋದನೆ ಪಡೆಯಲಾಗಿದೆ. ಅವರಿಗೆ ಸರ್ಕಾರದ ವಿವಿಧ ಯೋಜನೆಯಡಿ, ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ, ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಬಿ.ಮಂಜಪ್ಪ ಒತ್ತಾಯಿಸಿದರು. ಈಗಾಗಲೇ ಸೂಕ್ತ ದಾಖಲೆಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದು, ಶೀಘ್ರದಲ್ಲಿ ನಿವೇಶನ ಹಂಚಿಕೆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಚಿರ್ಚಿಸಲಾಯಿತು. ಉಪಾಧ್ಯಕ್ಷೆ ಕವಿತಾ ಶಿವಕುಮಾರ್, ಗ್ರಾ.ಪಂ. ಸದಸ್ಯರು, ಪಿಡಿಒ ಪಾರ್ವತಿ ಇತರರು ಇದ್ದರು.