ಮಗು ಸಾವು: ಶವವಿಟ್ಟು ಪ್ರತಿಭಟನೆ
ಸಾಗರ: ಹಸುಗೂಸಿನ ಸಾವಿಗೆ ಮಹಿಳಾ ವೈದ್ಯರ ಚಿಕಿತ್ಸಾ ಲೋಪವೆ ಕಾರಣ ಎಂದು ಆರೋಪಿಸಿ ಶನಿವಾರ ಪೋಷಕರು ಹಾಗೂ ಸಾರ್ವಜನಿಕರು ಉಪವಿಭಾಗೀಯ ಆಸ್ಪತ್ರೆ ಎದುರು ಮಗುವಿನ ಶವ ಇರಿಸಿಕೊಂಡು ಪ್ರತಿಭಟನೆ ನಡೆಸಿದರು.
ತಾಲೂಕಿನ ಆವಿನಹಳ್ಳಿಯ ಜಗದೀಶ್ ಎಂಬುವವರ ಪತ್ನಿ ನಾಗರತ್ನ ಹೆರಿಗೆಗಾಗಿ ಉಪವಿಭಾಗೀಯ ಆಸ್ಪತ್ರೆಗೆ ಕಳೆದ ಶನಿವಾರ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಪ್ರಸೂತಿ ತಜ್ಞೆ ಡಾ.ಪ್ರತಿಮಾ ಅವರು ಸಿಜೇರಿನಯನ್ ಮೂಲಕ ಮಗುವನ್ನು ಹೊರ ತೆಗೆಯಲು ರು. 5 ಸಾವಿರ ಲಂಚ ಕೇಳಿದ್ದಾರೆ. ಆಗ ಪೋಷಕರು ರು. 3500 ನೀಡಿದ್ದಾರೆ. ಮಗು ಜನನವಾಗಿ ಮೂರು ದಿನ ಆರೋಗ್ಯವಾಗಿಯೇ ಇತ್ತು.
ಏಕಾಏಕಿ ಮಗು ಅಳುವುದನ್ನು ಜಾಸ್ತಿ ಮಾಡಿದ್ದರಿಂದ ಪೋಷಕರು ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಜಯಲಕ್ಷ್ಮೀ ಅವರ ಬಳಿ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಕ್ಕಳ ತಜ್ಞೆ ಮಗುವನ್ನು ಮುಟ್ಟಿಯು ಸಹ ನೋಡಲಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಮಗುವಿನ ಪರೀಕ್ಷೆ ನಡೆಸಿದ ಮಕ್ಕಳ ತಜ್ಞೆ ಡಾ.ಜಯಲಕ್ಷ್ಮೀ ಮಗುವನ್ನು ತಕ್ಷಣ ಶಿವಮೊಗ್ಗಕ್ಕೆ ಕರೆದು ಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಷ್ಟರಲ್ಲಿ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿದೆ. ನಿರಂತರ ಮಗು ಅಳುತ್ತಿರುವುದು ಹಾಗೂ ಮಕ್ಕಳ ತಜ್ಞೆ ಚಿಕಿತ್ಸೆ ನೀಡದೆ ಇರುವುದರಿಂದ ಪೋಷಕರು ಮಗುವನ್ನು ಖಾಸಗಿ ಮಕ್ಕಳ ವೈದ್ಯರಾದ ಡಾ.ದೀಪಕ್ ಅವರಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷೆ ಮಾಡಿದ ಖಾಸಗಿ ವೈದ್ಯರು ತಕ್ಷಣ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದರು.
ನಾವು ಮಗುವನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದೆವು. ಆದರೆ ರಾತ್ರಿ 2ರ ಸುಮಾರಿಗೆ ಮಗು ಮೃತಪಟ್ಟಿದೆ. ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕಾಲಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಮಗು ಉಳಿಯುತಿತ್ತು. ವೈದ್ಯರ ನಿರ್ಲಕ್ಷ್ಯತನವೆ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದರು.
ಸಿಜೇರಿಯನ್ ಸಮಯದಲ್ಲಿ ಲಂಚ ಪಡೆದ ವೈದ್ಯೆ ಡಾ.ಪ್ರತಿಮಾ ಹಾಗೂ ಮಗುವಿಗೆ ಸರಿಯಾದ ಚಿಕಿತ್ಸೆ ನೀಡದ ಮಕ್ಕಳ ತಜ್ಞೆ ಡಾ.ಜಯಲಕ್ಷ್ಮೀ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಬಡರೋಗಿಗಳನ್ನು ಸುಲಿಗೆ ಮಾಡುವ ವೈದ್ಯ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಘಟಕ ಅಧ್ಯಕ್ಷ ಚೇತನರಾಜ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೇಟ್, ನಗರ ಘಟಕ ಅಧ್ಯಕ್ಷ ಸತೀಶಬಾಬು, ರಾಜು ಬಿ.ಮಡಿವಾಳ, ಗಣೇಶ್ ಶೆಟ್ಟಿ, ಲಲಿತಾ ಗಣೇಶ್, ಅರವಿಂದ ರಾಯ್ಕರ್, ಪ್ರಕಾಶ್, ಉಮೇಶ್ ಇದ್ದರು.