ತರೀಕೆರೆ ಬಂದ್ ಸಂಪೂರ್ಣ
ತರೀಕೆರೆ: ತಾಲೂಕು ಪತ್ರಕರ್ತರ ಸಂಘ, ಪ್ರಗತಿಪರ ಸಂಘಟನೆ, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪತ್ರಕರ್ತ ವಿ.ಶೇಖರ್ ಮೇಲೆ ನಡೆದ ಹಲ್ಲೆ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ, ಸೋಮವಾರ ಕರೆ ನೀಡಲಾಗಿದ್ದ ತರೀಕೆರೆ ಬಂದ್ ಯಶಸ್ವಿಯಾಯಿತು.
ಬೆಳಗಿನಿಂದಲೇ ಪಟ್ಟಣದ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್ಗಳು ಬಾಗಿಲು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಹಾತ್ಮಗಾಂಧಿ ವೃತ್ತ, ಸಾಲುಮರದಮ್ಮನ ದೇವಸ್ಥಾನದಿಂದ ಮಿನಿ ವಿಧಾನಸೌಧದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿತ್ತು.
ಮಹಾತ್ಮ ಗಾಂಧಿ ವೃತ್ತದ ಬಳಿ ಏರ್ಪಾಡಾಗಿದ್ದ ಸಭೆಯಲ್ಲಿ ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಮಾತನಾಡಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನೀಯ ಎಂದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡನೀಯವಾದುದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಮಾತನಾಡಿ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಸಚಿವ ಜಾರ್ಜ್ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪುರಸಭೆ ಮಾಜಿ ಸದಸ್ಯ ಟಿ.ಎಂ.ಭೋಜರಾಜ್ ಅವರು ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರು ಆಂತಕ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಪತ್ರಕರ್ತ ಶೇಖರ್ ಮೇಲಿನ ಹಲ್ಲೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಚ್.ಎಲ್.ರಮೇಶ್ ಬಂದ್ಗೆ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಮ್ಯಾಮ್ಕೋಸ್ ನಿರ್ದೇಶಕ ಆರ್.ದೇವಾನಂದ್, ಟಿ.ಎಚ್.ಮಂಜುನಾಥ್, ಜ.ಎನ್.ಸುಧಾಕರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಚಂದ್ರ, ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ತಾಲೂಕು ಅಧ್ಯಕ್ಷ ಸುರೇಶ್,ಹಳೆಯೂರು ಸೋಮಶೇಖರ್ ಮತ್ತಿತರರು ಮಾತನಾಡಿದರು. ಟಿ.ಎಚ್.ಮಂಜುನಾಥ್ ಮನವಿ ಪತ್ರ ಓದಿದರು. ನಂತರ ಉಪವಿಭಾಗಾಧಿಕಾರಿಗೆ ಮನವಿ ಪತ್ರ ಅರ್ಪಿಸಲಾಯಿತು.
ಪುರಸಭೆ ಮಾಜಿ ಸದಸ್ಯ ಟಿ.ಎಂ.ಭೋಜರಾಜ್, ಟಿ.ಎಚ್.ಮಂಜುನಾಥ್, ಯುವ ಮುಖಂಡ ಮೋಹನ್ಕುಮಾರ್, ಶೇಖರಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಚಂದ್ರ, ಸಂಘದ ಸದಸ್ಯರು, ಸೋಮಶೇಖರ್, ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.