ಧಾರಾಕಾರ ಮಳೆ, ರೈತರ ಮೊಗದಲ್ಲಿ ಕಳೆ
ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆಯ ಆರ್ಭಟ ಕಡಿಮೆಯಾಗಿಲ್ಲ, ಆಗಾಗ ಬಿಡುವಿನ ನಡುವೆ ಸೋಮವಾರವೂ ಮಳೆ ಮುಂದುವರಿದಿದೆ. ಅತಿ ಹೆಚ್ಚು ಮಳೆ ಬೀಳುತ್ತಿರುವ ಮೂಡಿಗೆರೆ ತಾಲೂಕಿನಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ರಜೆ ಮಂಗಳವಾರವೂ ಮುಂದುವರೆಯಲಿದೆ.
ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಮಳೆ ಬೀಳುತ್ತಿರುವುದರಿಂದ ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳಿಗೆ ಅನುಕೂಲವಾಗಿದೆ. ರೈತರು ರಾಗಿ ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಕೆಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಒಂದು ವಾರದಿಂದ ವಿದ್ಯುತ್ ಇಲ್ಲ. ಶೃಂಗೇರಿ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕುಗಳ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ಅಡಚಣೆಯಾಗಿದೆ. ಮೂಡಿಗೆರೆಯ ಗೋಣಿಬೀಡು ಹೋಬಳಿಯ ಯು. ಹೊಸಹಳ್ಳಿ ಹಾಗೂ ಬಣಕಲ್ ಹೋಬಳಿಯ ಅತ್ತಿಗೆರೆ ಗ್ರಾಮಗಳಲ್ಲಿ ಎರಡು ಮನೆಗಳು ಬಿದ್ದಿದ್ದು, ಇದರಿಂದ ರು. 33 ಸಾವಿರ ನಷ್ಟ ಸಂಭವಿಸಿದೆ.
ಮಳೆ, ಆಗಾಗ ಬಿಡುವು ನೀಡಿ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ- ಇಳಿಕೆಯಾಗುತ್ತಿದೆ. ತುಂಗಾ, ಭದ್ರಾ ಜಲಾಶಯಗಳ ನೀರಿನ ಒಳಹರಿವು ಮುಂದಿನ ದಿನಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಜಿಲ್ಲೆಯ 7 ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕಿನಲ್ಲಿ ಕಳೆದ ಐದು ದಿನಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಹೊರನಾಡು ಮತ್ತು ಕಳಸದ ರಸ್ತೆ ನೀರಿನಲ್ಲಿ ಜಲಾವ್ರತವಾಗಿದೆ. ಮಳೆಯಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜುಗಳಿಗೆ ಬಂದು ಹೋಗಲು ತೊಂದರೆಯಾಗುವುದರಿಂದ ಮೂಡಿಗೆರೆ ತಾಲೂಕಿನ ಶಾಲಾ- ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿತ್ತು. ಮಂಗಳವಾರವೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಮೂಡಿಗೆರೆ ಬಿಇಒ ಕೋಮಾರಯ್ಯ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕೆರೆಕಟ್ಟೆಯಲ್ಲಿ ಹೆಚ್ಚು ಮಳೆ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಉತ್ತಮ ಮಳೆಯಾಗಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ 199 ಮಿ.ಮೀ. ಮಳೆ ಬಂದಿದೆ.
ಚಿಕ್ಕಮಗಳೂರು ನಗರದಲ್ಲಿ 3.4 ಮಿ.ಮೀ., ಜೋಳ್ದಾಳ್- 15.4, ಆಲ್ದೂರು- 16.4, ಅತ್ತಿಗುಂಡಿ- 29, ಸಂಗಮೇಶ್ವರಪೇಟೆ- 45, ಬ್ಯಾರವಳ್ಳಿ- 69.2, ಕಡೂರು ಪಟ್ಟಣ- 7, ಯಗಟಿ- 2.2, ಗಿರಿಯಾಪುರ- 6.8, ಬೀರೂರು-13.9, ಎಮ್ಮೆದೊಡ್ಡಿ- 13.1, ಕೊಪ್ಪ- 70.2, ಹರಿಹರಪುರ- 74.3, ಜಯಪುರ- 63.5, ಕಮ್ಮರಡಿ- 46.7, ಬಸರೀಕಟ್ಟೆ- 103.8, ಮೂಡಿಗೆರೆ- 53, ಕೊಟ್ಟಿಗೆಹಾರ- 120.8, ಜಾವಳಿ- 59, ಕಳಸ- 78.6, ಎನ್.ಆರ್.ಪುರ- 58.4, ಬಾಳೆಹೊನ್ನೂರು- 46.4, ಮೇಗರಮಕ್ಕಿ- 38, ಶೃಂಗೇರಿ- 98, ಕಿಗ್ಗಾ- 129.7, ತರೀಕೆರೆ- 31.6, ಲಕ್ಕವಳ್ಳಿ- 46, ಅಜ್ಜಂಪುರ- 10, ಲಿಂಗದಹಳ್ಳಿ- 21.8, ತಣಿಗೇಬೈಲು- 30, ತ್ಯಾಗದಬಾಗಿ- 30, ರಂಗೇನಹಳ್ಳಿಯಲ್ಲಿ 46.6 ಮಿ.ಮೀ. ಮಳೆ ಬಂದಿದೆ.