'ಮೀನು ಕೃಷಿಕರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ'
ಚಿಕ್ಕಮಗಳೂರು: ಜನರಿಗೆ ಪೌಷ್ಟಿಕ ಆಹಾರ ನೀಡಲು ಮೀನು ಕೃಷಿಯಿಂದ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ರಂಗನಾಥ್ ಹೇಳಿದರು.
ಮೀನುಗಾರಿಕೆ ಇಲಾಖೆಯ ಕಚೇರಿ ಆವರಣದಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಮೀನುಗಾರಿಕೆ ಸಹಕಾರ ಸಂಘ- ಸಂಸ್ಥೆಗಳೊಂದಿಗೆ ಸೋಮವಾರ ಆಯೋಜಿಸಿದ್ದ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮೀನು ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ತಳಿ ಸಂವರ್ಧನೆ, ಪಾಲನೆ, ಸಾಕಣೆ ಒಳಗೊಂಡಂತೆ ಅನೇಕ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸುತ್ತಿದೆ. ಮೀನು ಕೃಷಿಕರು ಇದರ ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಸಾರ್ವಜನಿಕರಿಗೆ ಉತ್ತಮ ಪೌಷ್ಟಿಕ ಆಹಾರವಾದ ಮೀನು ಒದಗಿಸಬೇಕೆಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಹೆಚ್ಚಿನ ಜಲಸಂಪನ್ಮೂಲ ಹೊಂದಿದ್ದು, ಮೀನುಗಾರಿಕೆ ಕೃಷಿಗೆ ಉತ್ತಮ ವಾತಾವರಣವಿದ್ದು, ಸಖರಾಯಪಟ್ಟಣದ ಸಮೀಪ ಅಯ್ಯನಕೆರೆಯಲ್ಲಿ ಮೀನಿನ ಮರಿಗಳ ಪೂರೈಕೆಯಾಗುತ್ತಿದೆ. ಹೆಚ್ಚಿನ ಬೇಡಿಕೆ ಇದ್ದಲ್ಲಿ ಭದ್ರಾ ಜಲಾಶಯದ ಮೀನು ಮರಿ ಪಾಲನಾ ಕೇಂದ್ರದಿಂದ ಮೀನಿನ ಮರಿಗಳನ್ನು ಪೂರೈಸಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಮೀನುಗಾರಿಕೆ ಇಲಾಖೆ ಅಧಿಕಾರಿ ಉಮೇಶ್ ಅವರು, ಇಲಾಖೆ ವತಿಯಿಂದ ನೀಡುವ ವಿವಿಧ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಹುಲಿಕೆರೆಯ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಮಂಜಪ್ಪ, ಮೇದರವಳ್ಳಿ ಮೀನುಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ಉಪಸ್ಥಿತರಿದ್ದರು. ಪ್ರಕಾಶ್ ಸ್ವಾಗತಿಸಿದರು. ಕವನ ವಂದಿಸಿದರು.