ಗೃಹ ಸಚಿವರ ರಾಜಿನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ
ಚಿಕ್ಕಮಗಳೂರು: ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣ ಕುರಿತಂತೆ ಗಾಜಿನ ಮನೆಯಲ್ಲಿ ಕುಳಿತು ಎದುರು ಮನೆಗೆ ಕಲ್ಲು ಹೊಡೆಯುವ ಮೂಲಕ ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಭಾರತೀಯ ಜನತಾಪಾರ್ಟಿ ಉಳಿಸಿಕೊಂಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ಎಂ. ಸಂದೀಪ್ ತಿಳಿಸಿದ್ದಾರೆ.
ಯಾವುದೇ ಅತ್ಯಾಚಾರ ಪ್ರಕರಣಗಳನ್ನು ಸಮರ್ಥಿಸಿಕೊಳ್ಳುವ ಇರಾದೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಆದರೆ, ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ ಅವರ ಸಚಿವ ಸಂಪುಟ ಸಹೋದ್ಯೋಗಿಗಳನ್ನೊಳಗೊಂಡಂತೆ ಅನೇಕ ಬಿಜೆಪಿ ಶಾಸಕರು ಅತ್ಯಾಚಾರ ಸೇರಿದಂತೆ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಲ್ಲಿ ತೊಡಗಿದ ಆರೋಪದಲ್ಲಿ ಭಾಗಿಯಾದವರ ಬಗ್ಗೆ ಅಂದು ಸುದ್ದಿವಾಹಿನಿಗಳಲ್ಲಿ ಲೀಲಾಜಾಲವಾಗಿ ಹರಡಿ ರಾಜ್ಯದ ಮಾನ ದೇಶ ವಿದೇಶಗಳಲ್ಲಿ ಹರಾಜಾಗಿತ್ತು. ಆಗ ಚಕಾರವೆತ್ತದ ಶೋಭಾ ಕರಂದ್ಲಾಜೆ, ಇಂದು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರ ರಾಜೀನಾಮೆ ಕೇಳುತ್ತಿರುರುವುದು ರಾಜಕೀಯ ದುರುದ್ದೇಶಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಕಾಫಿ, ಅಡಿಕೆ ಬೆಳೆಗಾರರ ಬಗ್ಗೆ ಕಾಳಜಿ ವಹಿಸಿದ ನಿಕಟ ಪೂರ್ವ ಸಂಸದ ಜಯಪ್ರಕಾಶ್ ಹೆಗ್ಡೆಯವರ ಶ್ರಮದಿಂದ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಳ್ಳು ಹೇಳಿಕೆಗಳನ್ನೇ ದಾಳವಾಗಿಸಿಕೊಂಡ ಬಿಜೆಪಿ ಸ್ಥಳೀಯವಾಗಿ ಹೆಗ್ಡೆಯವರನ್ನು ಎದುರಿಸಲಾಗದೆ ಮೋದಿ ಹೆಸರಿನಲ್ಲಿ ಅಧಿಕಾರ ಹಿಡಿದಿದೆ. ಕೇಂದ್ರದಲ್ಲಿ ಗುಟ್ಕಾ ಲಾಭಿಗೆ ಮಣಿದು ಅಡಿಕೆ ಬೆಲೆ ತಗ್ಗಿಸಿ ಬೆಳೆಗಾರರಿಗೆ ಬರೆ ಎಳೆಯುವ ಹಿಂಬಾಗಿಲ ಲಾಭಿ ನಡೆಸಲು ಮುಂದಾಗಿರುವ ಮುನ್ಸೂಚನೆಯ ಗುಸು ಗುಸು ಎಬ್ಬಿದ್ದು ಸಂಸದೆ ಇಂತಹ ಕೆಟ್ಟ ನಿಲುವಿಗೆ ಕಡಿವಾಣ ಹಾಕದಿದ್ದಲ್ಲಿ ಕ್ಷೇತ್ರಕ್ಕೆ ಜನ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.