ವಿಕಸನ ಸಂಸ್ಥೆಯಿಂದ ಸಾವಯವ ಕೃಷಿ ಭಾಗ್ಯ ಪ್ರವಾಸ
ತರೀಕೆರೆ: ತಾಲೂಕಿನ ಕಸಬಾ ಹೋಬಳಿಯ ಚಿಕ್ಕಾತ್ತೂರು ಮತ್ತು ಯಲುಗೆರೆ ಗ್ರಾಮದ ರೈತರನ್ನು ಕೃಷಿ ಇಲಾಖೆ, ವಿಕಸನ ಸಂಸ್ಥೆ ವತಿಯಿಂದ ಸಾವಯವ ಭಾಗ್ಯ ಯೋಜನೆ ಅಡಿ ಕ್ಷೇತ್ರ ಪ್ರವಾಸ ನಡೆಸಲಾಯಿತು.
ವಿಠಲಾಪುರ ಗ್ರಾಮದ ಪ್ರಗತಿಪರ ರೈತ ವೀರಣ್ಣ ಅವರ ತೋಟಕ್ಕೆ ಭೇಟಿ ನೀಡಿ ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆ, ಬಯೋಡೈಜಸ್ಟರ್ ಘಟಕ, ಆಜೋಲ ತಯಾರಿಕೆ ವಿಧಾನ ಮತ್ತು ಮೇವಿನ ಬೆಳೆಯಾದ ಕಾಂಗೋ ಸಿಗ್ನಲ್ ಹುಲ್ಲಿನ ಬಗ್ಗೆ ಮಾಹಿತಿ ನೀಡಲಾಯಿತು.
ನಂತರ ನಾಗೇನಹಳ್ಳಿ ಪ್ರೌಢಶಾಲಾ ನಿವೃತ್ತ ಶಿಕ್ಷಕ, ಸಾವಯವ ಕೃಷಿಕರಾದ ತಿಮ್ಮಯ್ಯ ಅವರ ತೋಟಕ್ಕೆ ಭೇಟಿ ನೀಡಿ ಅಲ್ಲಿ ಜೇನು ಸಾಕಾಣಿಕೆ, ಜೀವಾಮೃತ ತಯಾರಿಕೆ ಮತ್ತು ಎರೆಹುಳು ಘಟಕದ ಬಗ್ಗೆ ಮಾಹಿತಿ ಪಡೆಯಲಾಯಿತು.
ಶಿವಮೊಗ್ಗ ಮಾಚೇನಹಳ್ಳಿ ಹಾಲಿನ ಡೈರಿಗೆ ಭೇಟಿ ನೀಡಿ, ಆಲ್ಲಿ ಹಾಲಿನ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆಯ ಬಗ್ಗೆ, ನವಿಲೆ ಕೃಷಿ ವಿಜ್ಞಾನ ಕೇಂದ್ರದಲ್‌ಲ್ಲಿ ಎರೆಹುಳು ಗೊಬ್ಬರ ತಯಾರಿಕೆ, ಬಯೋಡೈಜಸ್ಟರ್ ಘಟಕ, ಜೀವಾಮೃತ ತಯಾರಿಕೆ, ಪಂಚಗವ್ಯ, ಅಜೋಲ ತಯಾರಿಕೆ ವಿಧಾನ, ಕುರಿ ಮತ್ತು ಹಸು ಸಾಕಾಣಿಕೆ ಬಗ್ಗೆ, ರಾಮಚಂದ್ರಾಪುರ ಮಠದಲ್ಲಿ 35 ಜಾತಿಯ ಹಸು ತಳಿಗಳ ಸಂರಕ್ಷಣೆ ಮತ್ತು ಮಹತ್ವದ ಬಗ್ಗೆ, ಎರೆಹುಳು ತಯಾರಿಕೆ ಬಗ್ಗೆ ತಿಳಿದುಕೊಳ್ಳಲಾಯಿತು.