ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೀವ ತೂಗುವ ಸುಂಕದಮಕ್ಕಿ ತೂಗು ಸೇತುವೆ!

Rashmi Kasaragodu
Updated On : 24 Jul 2014, 11:24 am

ನೆಮ್ಮಾರ್ ಅಬೂಬಕರ್
ಶೃಂಗೇರಿ: ತಾಲೂಕಿನ ಕೆರೆ ಪಂಚಾಯಿತಿ ಸುಂಕದಮಕ್ಕಿ ಸೇತುವೆಯ ಎರಡೂ ಬದಿಯ ತಂತಿಯ ತಡೆಬೇಲಿ ಕಳಚಿಹೋಗಿದ್ದು, ಸಂಚರಿಸುವವರ ಜೀವವನ್ನು ನಿತ್ಯ ತೂಗಿ ತೂಗಿ ದಿಗಿಲುಗುಟ್ಟಿಂುತ್ತಿದೆ.
ದಿನನಿತ್ಯ ಶಾಲೆಗೆ ಹೋಗುವ ಪುಟ್ಟಕಂದಮ್ಮಗಳಿಂದ ಹಿಡಿದು ವಯೋವೃದ್ಧರು ಸೇರಿದಂತೆ ನೂರಾರು ಜನ ಈ ತೂಗು ಸೇತುವೆ ಮಾರ್ಗದಲ್ಲಿ ಸಂಚರಿಸುತ್ತಾರೆ. ಎರಡು ವರ್ಷಗಳಿಂದ ಇದೇ ದುಸ್ಥಋತಿ ತಲೆದೋರಿದೆ. ಸೇತುವೆಯ ಮೇಲ್ಭಾಗವೆಲ್ಲ ಪಾಚಿಗಟ್ಟಿದೆ. ಜೋರಾಗಿ ಓಡಾಡಿದರೆ ಜಾರಿ ತುಂಗೆ ಮಡಿಲಲ್ಲಿ ಚಿರನಿದ್ರೆ ಕಾಣುವ ಅಪಾಯವಿದೆ.
ಈ ಸೇತುವೆ ಸುಂಕದಮಕ್ಕಿ, ಯಡದಳ್ಳಿ, ಹರೆಬೀಳಲು, ಹೆಕ್ತೂರು, ದಿಂದೋಡಿ, ಅವುಂಟು, ದ್ಯಾವುಂಟು, ಕಾರ್ಕಿ, ವಡ್ಡಿನಕಾರ್ಕಿ, ಹುಲುಗಾರು ಬೈಲು, ಈಚನಕಲ್ಲು, ಭೂತನಬೈಲು, ಕಲ್ಗದ್ದೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ 13 ರ ಮಂಗಳೂರು ಶಿವಮೊಗ್ಗ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವಾಗಿದೆ. ಸೇತುವೆ ದಿನಕಳೆದಂತೆ ಅಪಾಯದಂಚಿಗೆ ತಲುಪಿ ನಿತ್ಯ ಸಂಚಾರಿಗಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ.
ತೂಗು ಸೇತುವೆಯ ಕಬ್ಬಿಣದ ರಾಡ್‌ಗಳು ಅಲ್ಲಲ್ಲಿ ಬೆಂಡಾಗಿ ಬಾಗಿವೆ. ನಟ್-ಬೋಲ್ಟ್‌ಗಳು ಕಳಚಿ ನದಿಗೆ ಬೀಳುತ್ತಿವೆ. ಸೇತುವೆ ಕೆಳಗೆ ತುಂಗೆ ಪ್ರವಾಹದಿಂದ ಹರಿಯುತ್ತಿದ್ದರೆ ಮೇಲ್ಭಾಗದಲ್ಲಿ ತಡೆಬೇಲಿಯಿಲ್ಲದ ಸೇತುವೆಯ ಮೇಲೆ ನಡೆಯುವವರ ಪ್ರಾಣ ಎಲ್ಲಿ ಹಾರಿಹೋದೀತೋ ಎಂಬ ಭಯ ವರ ಎದೆ ಝಲ್ ಎನಿಸುತ್ತಿದೆ.
ಈ ಸೇತುವೆ ನಿರ್ಮಾಣಗೊಂಡು ನಾಲ್ಕೈದು ವರ್ಷಗಳು ಕಳೆದಿವೆಯಷ್ಟೆ. ಕಳೆದೆರಡು ವರ್ಷಗಳಿಂದ ಸೇತುವೆಗೆ ನಿರ್ಮಿಸಲಾಗಿದ್ದ ತಡೆಬೇಲಿ ಹಂತಹಂತವಾಗಿ ತುಂಡಾಗಿ ನದಿಗೆ ಬೀಳಲು ಆರಂಭವಾಗಿತ್ತು. ಆದರೂ ಸಂಬಂಧಪಟ್ಟವರು ಇತ್ತ ಗಮನಹರಿಸಲೇ ಇಲ್ಲ.
ನಂತರ ತುಂಗಾ ನದಿಯ ಪ್ರವಾಹದಲ್ಲಿ ಬಂದ ಬೃಹತ್ ಮರವೊಂದು ಇದಕ್ಕೆ ಅಪ್ಪಳಿಸಿದ ಪರಿಣಾಮ ಸೇತುವೆ ರಾಡ್‌ಗಳು ಬೆಂಡಾಗಿ ಬೋಲ್ಟ್‌ನಟ್‌ಗಳು ಕಳಚಿ ಸೇತುವೆಗೆ ಹಾನಿಯಾಗಿದೆ. ಆದರೆ, ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ನಿರ್ಲಕ್ಷ ವಹಿಸುತ್ತಲೇ ಬಂದರು.
ಕಳೆದ ವರ್ಷ ಗ್ರಾಮಸ್ಥರೇ ಸೇರಿಕೊಂಡು ಆಗುವ ಅನಾಹುತ ತಪ್ಪಿಸಲು ಅಡಕೆ ದಬ್ಬೆಗಳನ್ನು ಸಂಗ್ರಹಿಸಿ ತಡೆಬೇಲಿ ನಿರ್ಮಿಸಿದ್ದರು. ಬೇಸಿಗೆಯಲ್ಲಿ ಅಳಿದುಳಿದ ತಡೆಬೇಲಿ ಸೇರಿದಂತೆ ಅಡಕೆ ದಬ್ಬೆಯ ತಡೆಬೇಲಿಯೂ ಕಳಚಿಬಿದ್ದಿತು. ಈ ಸೇತುವೆ ಮೇಲೆ ಜನಸಂಚಾರ ಮಾತ್ರ ಎಂದಿನಂತೆ ನಡೆಯುತ್ತಿತ್ತು. ನಂತರ ದ್ವಿಚಕ್ರ ವಾಹನಗಳು ಓಡಾಡಲು ಆರಂಭಗೊಂಡಿತು.
ಆದರೀಗ ಜನರು ಓಡಾಡುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಹೋಗುವ ಪುಟಾಣಿ ಕಂದಮ್ಮಗಳನ್ನು ಪ್ರತಿದಿನ ಬೆಳಿಗ್ಗೆ ಸೇತುವೆ ದಾಟಿಸಿ ಶಾಲೆಗೆ ಕಳುಹಿಸಿ, ಸಂಜೆ ಶಾಲೆಯಿಂದ ಬರುವಾಗ ಸೇತುವೆ ಬಳಿ ಕಾದು ಕುಳಿತು ಸೇತುವೆ ದಾಟಿಸಿ ಕರೆದುಕೊಂಡು ಮನೆಗೆ ಹೋಗುವಂತಾಗಿದೆ. ಈ ಮಧ್ಯೆ ಸೇತುವೆ ಯಾವ ಟೈಮಲ್ಲಿ ಕಡಿದು ಬಿದ್ದೀತು ಎಂಬ ಆತಂಕ ಮಾತ್ರ ಬೆನ್ನ ಹಿಂದೇ ಬರುವಂತೆ ಸಂಚರಿಸುವವರಿಗೆ ಆಗುತ್ತಿದೆ.
ಮೊದಮೊದಲು ಈ ಜಾಗದಲ್ಲಿ ದಾಟುಗಂಡಿಯಿತ್ತು. ಬೇಸಿಗೆಯಲ್ಲಿ ನದಿ ದಾಟುತ್ತಿದ್ದರು. ಮಳೆಗಾಲದಲ್ಲಿ ಗ್ರಾಮಸ್ಥರು ಕಾಲುಸಂಕ ನಿರ್ಮಿಸಿ ಓಡಾಡುತ್ತಿದ್ದರು. ಕೆಲ ವರ್ಷಗಳಲ್ಲಿ ನಿರ್ಮಿಸಿದ ತೂಗು ಸೇತುವೆ ದುರ್ಗತಿ ತಲುಪಿರುವುದು ಮಾತ್ರ ದುರಂತ.
ಗ್ರಾಮಸ್ಥರು ಗ್ರಾಪಂ, ತಾಪಂ ಅಧ್ಯಕ್ಷರು, ಜಿಪಂ ಸದಸ್ಯರು, ಶಾಸಕರು ಮತ್ತಿತರ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರದ ಗಮನಕ್ಕೆ ಸಮಸ್ಯೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಸುಬ್ರಮಣ್ಯ, ವೆಂಕಟರಮಣ, ಸುಬ್ಬಯ್ಯ, ರಮೇಶ್, ಬೋಬಯ್ಯ.
ಪ್ರತಿ ಗ್ರಾಮ ಸಭೆ, ಜನಸ್ಪಂದನ ಸಭೆಗಳಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮಳೆಗಾಲದ ಪರಿಸ್ಥಿತಿಯಲ್ಲಿ ಇಲ್ಲಿನ ಜನರ ಸಂಕಷ್ಟ ನಿವಾರಿಸುವತ್ತ ಸರ್ಕಾರ, ಸ್ಥಳೀಯ ಆಡಳಿತ ಗಮನಹರಿಸಿ ಮುಂದೆ ಸಂಭವಿಸಬಹುದಾದ ಅಪಾಯಕ್ಕೆ ತೆರೆ ಎಳೆಯುವುದೇ?


ಸಾಲದ ಬಡ್ಡಿ ಮನ್ನಾ
ಚಿಕ್ಕಮಗಳೂರು:  ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಧನಸಹಾಯದ ಯೋಜನೆಯಡಿ 1957 ರಿಂದ 1999 ರವರೆಗೆ ಸಾಲವನ್ನು ಪಡೆದು ಬಾಕಿ ಇರುವ ಫಲಾನುಭವಿಗಳಿಗೆ ಏಕಗಂಟು ತೀರುವಳಿ ಯೋಜನೆಯ ಪೂರ್ಣ ಬಡ್ಡಿ ಮನ್ನಾ ಮಾಡಲು ಮಂಡಳಿಯು ನಿರ್ದೇಶಿಸಿದ್ದು, ಸಾಲ ಪಡೆದ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದು. ಮಾಹಿತಿಗಾಗಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ಜಿಲ್ಲಾ ಕೈಗಾರಿಕಾ ಕಟ್ಟಡ, ಜಿ.ಪಂ. ಹತ್ತಿರ ಚಿಕ್ಕಮಗಳೂರು, ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.


ಸಿಆರ್‌ಪಿ ಹುದ್ದೆಗಳಿಗೆ ಕೌನ್ಸೆಲಿಂಗ್
ಜೂ.29ರಂದು ನಡೆದ ಬಿಆರ್‌ಪಿ., ಸಿಆರ್‌ಪಿ ಹುದ್ದೆಗಳ ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಖಾಲಿ ಇರುವ ಬಿಆರ್‌ಪಿ, ಸಿಆರ್‌ಪಿ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಜು. 24 ಮಧ್ಯಾಹ್ನ 3 ಗಂಟೆಗೆ ಡಯಟ್ ಚಿಕ್ಕಮಗಳೂರು ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಮಾಹಿತಿಗಾಗಿ ಉಪನಿರ್ದೇಶಕರು, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement