ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಿವೇಶನ ಹಂಚಿಕೆಯಲ್ಲಿ ಅಕ್ರಮ: ಮನವಿ

Rashmi Kasaragodu
Updated On : 24 Jul 2014, 11:25 am

ಚಿಕ್ಕಮಗಳೂರು: ತಾಲೂಕಿನ ತೇಗೂರು ಗ್ರಾಮ ಪಂಚಾಯ್ತಿಯಲ್ಲಿ ನಿವೇಶನ ಹಂಚಿಕೆ ಪಟ್ಟಿ ಸಿದ್ಧಪಡಿಸುವಾಗ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ಸ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ತೇಗೂರು ಗ್ರಾಮ ಪಂಚಾಯಿತಿಯಲ್ಲಿ ವಸತಿ ಹಾಗೂ ನಿವೇಶನ ರಹಿತರಿಗೆ ಸರ್ಕಾರ ನೀಡುವ ನಿವೇಶನಕ್ಕಾಗಿ  ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧದಲ್ಲಿ ಗ್ರಾಮ ಪಂಚಾಯಿತಿಯವರು ಸರ್ಕಾರದ ನಿಯಮಗಳನ್ನು  ಸರಿಯಾಗಿ ಪಾಲನೆ ಮಾಡಿಲ್ಲ. ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೆ ಅಸ್ತಿವಂತರು, ಆರ್ಥಿಕವಾಗಿ ಸದೃಢವಾಗಿರುವ ಹಾಗೂ ರು. 60 ರಿಂದ 75 ಸಾವಿರ ಲಂಚ ನೀಡಿದವರನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಯಾವುದೇ ಸವಲತ್ತು ನೀಡಬೇಕಾದರೆ ಫಲಾನುಭವಿಗಳನ್ನು ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಆಯ್ಕೆ ಮಾಡಬೇಕು.
ಆದರೆ, ಈ ಗ್ರಾಮ ಪಂಚಾಯಿತಿಯಲ್ಲಿ ಇದ್ಯಾವುದನ್ನೂ ಮಾಡದೆ ಗ್ರಾಪಂ ಸದಸ್ಯರೇ ಪಟ್ಟಿ ಮಾಡಿಕೊಂಡು ಅವುಗಳನ್ನು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಮಾಡಿ ಸಂಬಂಧಪಟ್ಟ ಇಲಾಖೆ ಅನುಮತಿಗಾಗಿ  ಕಳುಹಿಸಿಕೊಡುವ  ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಈ ಬಗ್ಗೆ ಕೂಲಂಕಶವಾಗಿ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ  ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಫಲಾನುಭವಿಗಳನ್ನು ಆಯ್ಕೆಮಾಡುವಾಗ ಅಂಗವಿಕಲರು, ವಿಧವೆಯರು, ದಲಿತರು ಹಾಗೂ ಆರ್ಥಿಕವಾಗಿ ಹಿಂದುಳಿದವರು  ಹಾಗೂ ನಿವೇಶನ ರಹಿತರನ್ನೇ ಆಯ್ಕೆ  ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ತೇಗೂರು ಗ್ರಾಮದ ಕೆ.ಪಿ. ಹನೀಫ್, ಮಲ್ಲಿಕಾರ್ಜುನಯ್ಯ, ಶಂಕರ್, ವಿಶ್ವನಾಥ್, ಮುಜಾಹಿದ್, ಜಾವೀದ್, ಮಹೇಶ್, ಶಿವಪ್ಪ, ಮಹಬೂದ್, ಬಾಷಿಸ್, ಪರಮೇಶ್, ಸುಬ್ಬಣ್ಣ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement