ಮರಗಳು ಧರೆಗೆ
ನರಸಿಂಹರಾಜಪುರ: ತಾಲೂಕಿನಾದ್ಯಂತ ಬುಧವಾರವೂ ವರುಣನ ಆರ್ಭಟ ಮುಂದುವರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ತಂತಿಯ ಮೇಲೆ ಬಿದಿರು, ಮರಗಳು ಉರುಳಿ ಬೀಳುತ್ತಿದ್ದು ಬಹುತೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಕುದುರೆಗುಂಡಿ ಸಮೀಪದ ಗಣೇಶ ನಗರ ರಸ್ತೆ ಪಕ್ಕದ ವಿದ್ಯುತ್ಲೈನ್ ಮೇಲೆ ಮರ ಉರುಳಿ 9 ವಿದ್ಯುತ್ ಕಂಬಗಳು ಸಾಲು, ಸಾಲಾಗಿ ಬಿದ್ದಿವೆ. ರಸ್ತೆಗೆ ಮರ ಬಿದ್ದಿರುವುದರಿಂದ ಬಸ್ಸುಗಳು ಸೀತೂರು ಮಾರ್ಗವಾಗಿ ಚಲಿಸಿದವು. ಕುದುರೆಗುಂಡಿ-ಕಾನೂರು ರಸ್ತೆಯ ಮೇಲೆ 2 ಅಡಿ ನೀರು ನಿಂತಿದೆ. ಸಿಂಸೆಯ ಮಂಜು ಎನ್.ಗೌಡ ಎಂಬುವರ ಮನೆಯ ಹಿಂಭಾಗದ ಮಾಡಿನ ಮೇಲೆ ಮರ ಉರುಳಿ ಸೀಟುಗಳು ಪುಡಿಯಾಗಿದೆ.ಮುತ್ತಿನಕೊಪ್ಪದ ತುಂಗಾ ನದಿ ಬತ್ತದ ಗದ್ದೆಯ ಮೇಲೆ ಹರಿಯುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಸುರಿದ ಮಳೆ, ಗಾಳಿಗೆ ಜನರು ತತ್ತರಿಸಿದ್ದಾರೆ.
ಮೂಡಿಗೆರೆ ಜನ ತತ್ತರ
ಮೂಡಿಗೆರೆ: ಕಳೆದ ರಾತ್ರಿಯಿಂದ ಸುರಿದ ಕುಂಭದ್ರೋಣ ಮಳೆಯಿಂದಾಗಿ ತಾಲೂಕಿನ ಜನತೆ ತತ್ತರಗೊಂಡಿದ್ದಾರೆ. ಪಟ್ಟಣದ ಗಂಗನಮಕ್ಕಿ ಬಳಿ ಚರಂಡಿಯ ನೀರು ಮತ್ತು ಮಳೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಜಲಾವೃತ ಗೊಂಡು ಅಂಗಡಿಗಳಿಗೆ ನೀರು ನುಗ್ಗಿದ್ದರೆ ತಾಲೂಕಿನ ಅಂಗಡಿ ಗ್ರಾಮದಲ್ಲಿ ಪ್ರೈಮರಿ ಶಾಲೆಯ ಗೋಡೆ ಕುಸಿದಿದೆ. ಪಟ್ಟಣ ಪಂಚಾಯಿತಿ ನಿರ್ಲಕ್ಷದಿಂದ ಹೊಯ್ಸಳ ಕ್ರೀಡಾಂಗಣದ ರಸ್ತೆ ದುರಸ್ತಿ ಆಗದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಕಿರಿಕಿರಿಯಾಗಿದೆ. ಕೆಲವರು ವಾಹನದಿಂದ ಬಿದ್ದ ನಿದರ್ಶನಗಳೂ ಇವೆ. ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲದಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.