ಅರ್ಹರಿಗೆ ಸೌಲಭ್ಯ ಸಿಕ್ಕರೆ ಯೋಜನೆ ಫಲಪ್ರದ
ಚಿಕ್ಕಮಗಳೂರು: ಬೆವರು ಸುರಿಸಿ ದುಡಿಯುವವರಿಗೆ ಸೌಲಭ್ಯ ದೊರೆತಾಗ ಸರ್ಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದು ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ. ತಮ್ಮಣ್ಣ ಹೇಳಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಕಟ್ಟಡ ಕಾರ್ಮಿಕರ ಫೆಡರೇಷನ್ ಗುರುವಾರ ಹಮ್ಮಿಕೊಂಡಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ಎಂದರೆ ಪ್ರಾಚೀನ ಕಾಲದ ವೃತ್ತಿ, ಸಾವಿರಾರು ವರ್ಷದ ಹಿಂದೆ ಆರಂಭವಾದ ಬೃಹತ್ ಉದ್ಯಮ. ಈ ವೃತ್ತಿಯಿಂದ ಇಂದು ಅನೇಕ ತಂತ್ರಜ್ಞಾನ, ಆವಿಷ್ಕಾರಗಳಾಗಿವೆ. ಆದರೆ, ಇದರ ಹಿಂದೆ ಬೆವರು ಸುರಿಸಿ ಶ್ರಮದಿಂದ ದುಡಿದವರಿಗೆ ಪ್ರಯೋಜನವಾಗದಿರುವುದು ವಿಷಾದದ ಸಂಗತಿ ಎಂದರು.
ಆರ್ಥಿಕ ಸೌಲಭ್ಯ: ಕಾರ್ಮಿಕರ ಕಲ್ಯಾಣ ಮತ್ತು ಸುರಕ್ಷೆ ಬಗ್ಗೆ ಮಂಡಳಿಯಿಂದ ಯೋಚನೆ ಮಾಡಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರ ಮತ್ತು ಮಾಲೀಕರು ಕಾರ್ಮಿಕರಿಗೆ ಏನನ್ನು ಪೂರೈಸಬೇಕು ಎನ್ನುವ ಬಗ್ಗೆ ನಿಬಂಧನೆ ಮಾಡಲಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿ ಒಂದು ಸ್ವಾಯತ್ತ ಸಂಸ್ಥೆ, ನಿರ್ಮಾಣದ ವೆಚ್ಚದ ಶೇ. 1ರಷ್ಟು ಮಾಲೀಕರು ಮಂಡಳಿಗೆ ನೀಡಬೇಕು. ಮಂಡಳಿಯಿಂದ 12 ಪ್ರಮುಖ ಆರ್ಥಿಕ ಸೌಲಭ್ಯ ಕಲ್ಪಿಸಿದೆ. ಸಾವು- ನೋವು, ಅಂಗವಿಕಲತೆಗೆ ಧನಸಹಾಯ ಮಾಡುವ ಯೋಜನೆ ಇದ್ದು, ಉಪಕರಣ ಖರೀದಿ, ಮನೆ ನಿರ್ಮಾಣಕ್ಕೆ ಸಬ್ಸಿಡಿ ಸಾಲ, ಪೆನ್ಷನ್ ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಂಘಟನೆ ಅಗತ್ಯ: ಸಂಘದ ಜಿಲ್ಲಾಧ್ಯಕ್ಷ ಜಿ. ರಘು ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ಕೊಡುವ ಪರಿಹಾರ ಹೆಚ್ಚಿಸಬೇಕಾದರೆ ಮೊದಲು ನಾವು ಸಂಘಟಿತರಾಗಬೇಕು. ಸಂಘಟಿತರಾಗದೆ ಮಂಡಳಿಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದ ಕಾರಣ ಆ ಹಣ ದುರುಪಯೋಗವಾಗುತ್ತಿದೆ ಎಂದರು.
ಇದುವರೆಗೂ ಕೇವಲ 415 ಜನ ಮಾತ್ರ ಈ ಸೌಲಭ್ಯ ಸದುಪಯೋಗಪಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿನ ಕಟ್ಟಡ ಕಾರ್ಮಿಕರು ಸದಸ್ಯತ್ವ ನೋಂದಣಿ ಜತೆ ಫಲಾನುಭವಿಗಳು ಪ್ರತಿ 3 ವರ್ಷಕ್ಕೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು ಎಂದರು.
ಕಟ್ಟಡ ಕಾರ್ಮಿಕರು ಸ್ವಂತ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಸಾಲ ಸೌಲಭ್ಯವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಸಬೇಕು. ಈಗಿರುವ ಹಣದಲ್ಲಿ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಎ. ಮಾರಿಮುತ್ತು, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ. ಗುಣಶೇಖರನ್, ಜಿಲ್ಲಾ ಕಾರ್ಯದರ್ಶಿ ಎಸ್. ವಿಜಯಕುಮಾರ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ, ಸಿ. ಧರ್ಮರಾಜ್, ಕೃಷ್ಣಮೂರ್ತಿ, ಓಬಯ್ಯ, ಎ. ಜಯಕುಮಾರ್, ಜಾರ್ಜ್ ಆಸ್ಟಿನ್ ಉಪಸ್ಥಿತರಿದ್ದರು.