ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿ ನಗರ ಘಟಕ ಯುವ ಮೋರ್ಚಾ ಅಧ್ಯಕ್ಷರ ಆಯ್ಕೆ

Rashmi Kasaragodu
Updated On : 25 Jul 2014, 11:17 am

ಕಡೂರು: ಬಿಜೆಪಿ ನಗರ ಘಟಕ ಯುವ ಮೋರ್ಚಾ ಅಧ್ಯಕ್ಷರಾಗಿ ಪುರಸಭಾ ಸದಸ್ಯ ಸಿ.ರಾಜೇಶ್ ಆಯ್ಕೆಯಾಗಿದ್ದಾರೆ. ಘಟಕದ ಉಪಾಧ್ಯಕ್ಷರಾಗಿ ಕೆ. ಎಂ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಕಾಂತೇಶ್, ಕಾರ್ಯದರ್ಶಿಯಾಗಿ ಜಯಕುಮಾರ್‌ರನ್ನು ಆಯ್ಕೆ ಮಾಡಲಾಗಿದೆ. ಈ ಹುದ್ದೆಯನ್ನು ಸಮರ್ಥವಾಗಿ ಬಳಸಿಕೊಂಡು ಬಿಜೆಪಿ ಸಂಘಟನೆಗೆ ಆದ್ಯತೆ ನೀಡಿ ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗುವಂತೆ ಆದೇಶಿಸಿ ರಾಜೇಶ್ ಹಾಗೂ ಪದಾಧಿಕಾರಿಗಳನ್ನು ಪಕ್ಷದ ಮುಖಂಡರು ಅಭಿನಂದಿಸಿದ್ದಾರೆ.
ಈರುಳ್ಳಿ, ಆಲೂಗಡ್ಡೆಗೆ ರೋಗ: ಸೂಚನೆ
ತರೀಕೆರೆ: ತಾಲೂಕಿನ ಶಿವನಿ ಮತ್ತು ಅಜ್ಜಂಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಯಲಾಗುತ್ತಿದ್ದು, ಮೋಡ ಮತ್ತು ಜಿಟಿ ಜಿಟಿ ಮಳೆಯಿಂದಾಗಿ ರೋಗ ತಗಲುವ ಸಾಧ್ಯತೆ ಇದೆ. ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ವಹಿಸಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಜ್ಜಂಪುರ ಮತ್ತು ಶಿವನಿ ಹೋಬಳಿಯ ಸುಮಾರು 6000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ರೈತರು ಬೆಳೆಯುತ್ತಿದ್ದು, ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಹದ ಮಳೆ ಮತ್ತು ಸೋನೆ ಮಳೆ ಹಾಗೂ ಶೀತದ ಗಾಳಿ ಬೀಸುತ್ತಿರುವುದರಿಂದ ಈರುಳ್ಳಿಗೆ ಮಜ್ಜಿಗೆ ರೋಗ (ಪರ್ಪಲ್ ಬ್ಲಾಚ್) ಮತ್ತು ಆಲೂಗಡ್ಡೆಗೆ ಅಂಗಮಾರಿ ರೋಗ ಹರಡುವ ಸಾಧ್ಯತೆ ಇದೆ. ರೈತರು ಮುಂಜಾಗ್ರತೆ ಕ್ರಮವಾಗಿ ಈರುಳ್ಳಿಗೆ ಕವಚ್ ಎರಡೂವರೆ ಗ್ರಾಂ ಅಥವಾ ಕರ್ಜೇಟ್ ಎರಡೂವರೆ ಗ್ರಾಂ ಮತ್ತು ಹಸಿರು ಹುಳು ನಿಯಂತ್ರಣಕ್ಕೆ ಕರಾಟೆ ಎರಡೂವರೆ ಎಂಎಲ್ ಅಥವಾ
ಅಸಿಫೇಟ್ ಎರಡೂವರೆ ಗ್ರಾಂ, ಆಲೂಗಡ್ಡೆ ಅಂಗಮಾರಿ ನಿಯಂತ್ರಿಸಲು ಡಿಎಂ 45, ಅಥವಾ ಕರ್ಜೇಟ್ ಅಥವಾ ಸೆಕ್ಟೀನ್ ಎರಡೂವರೆ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾಲು ಏರಿಸುವುದು: ಆಲೂಗಡ್ಡೆ ಬಿತ್ತನೆಯಾಗಿ ಒಂದು ತಿಂಗಳು ಸಮಯ ಮುಗಿದಿದ್ದು, ಮಳೆಯ ಬಿಡುವು ನೋಡಿಕೊಂಡು ರೈತರು ಆಲೂಗಡ್ಡೆ ಸಾಲನ್ನು ಏರಿಸಬೇಕು. ಇದರಿಂದ ಮುಂದೆ ಗಡ್ಡೆ ಬೆಳವಣಿಗೆಯಾದಂತೆ ಸೂರ್ಯನ ಕಿರಣಗಳು ಗಡ್ಡೆಗೆ ತಾಗುವುದಿಲ್ಲ. ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ, ಸೋನೆ ಮಳೆ ಶೀತದ ಗಾಳಿ ಬೀಸುತ್ತಿರುವುದರಿಂದ ಅಂಗಮಾರಿ ರೋಗ ಹರಡುವ ಸಾಧ್ಯತೆ ಇರುವುದರಿಂದ ಯಾವುದೇ ಕಾರಣಕ್ಕೂ ಯೂರಿಯಾ ಗೊಬ್ಬರವನ್ನು ಆಲೂಗಡ್ಡೆಗೆ ಉಪಯೋಗಿಸಬಾರದು. ಅಜ್ಜಂಪುರ ಮತ್ತು ಶಿವನಿ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಈರುಳ್ಳಿ ಬೆಳವಣಿಗೆಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement