ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅರ್ಹರಿಗೆ ಸಿಗದ ನಿವೇಶನ

Rashmi Kasaragodu
Updated On : 26 Jul 2014, 11:09 am

ಚಿಕ್ಕಮಗಳೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸವಾಗಿರುವ ಬಡವರಿಗೆ ನಿವೇಶನ ಹಾಗೂ ವಸತಿ ನೀಡಲು ರಾಜ್ಯ ಸರ್ಕಾರ ವಸತಿ ಯೋಜನೆ ಜಾರಿಗೆ ತಂದಿದ್ದರೂ ಅರ್ಹ ಫಲಾನುಭವಿಗಳಿಗೆ ನಿವೇಶನ ಹಾಗೂ ವಸತಿ ನೀಡಲು ಸಾಧ್ಯವಾಗುತ್ತಿಲ್ಲ.
ಇದಕ್ಕೆ ಕಾರಣ- ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಫಲಾನುಭವಿಗಳ ಪಟ್ಟಿ ಸಿದ್ಧವಾಗಿದ್ದರೂ ಶಾಸಕರ ಅಧ್ಯಕ್ಷತೆಯಲ್ಲಿರುವ ಆಶ್ರಯ ಸಮಿತಿ ಸಭೆಗಳು ನಡೆದಿಲ್ಲ. ಇನ್ನು ಕೆಲವೆಡೆ ನಿವೇಶನ ನೀಡಲು ಸರ್ಕಾರಿ ಹಾಗೂ ಖಾಸಗಿ ಜಮೀನುಗಳು ಜಿಲ್ಲೆಯಲ್ಲಿ ಲಭ್ಯವಿಲ್ಲ.
ನಿವೇಶನ- ವಸತಿ ರಹಿತರು: ಸದ್ಯ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ 2588 ನಿವೇಶನ ರಹಿತರು, 1518 ವಸತಿ ರಹಿತರು, ಕಡೂರು ಪುರಸಭೆಯಲ್ಲಿ 1226 ನಿವೇಶನ ರಹಿತರು, 106 ವಸತಿ ರಹಿತರು, ಬೀರೂರು ಪುರಸಭೆಯಲ್ಲಿ 1060 ನಿವೇಶನ  ರಹಿತರು, 264 ವಸತಿ ರಹಿತರು, ತರೀಕೆರೆ ಪುರಸಭೆಯಲ್ಲಿ 1025 ನಿವೇಶನ ರಹಿತರು, 463 ವಸತಿ ರಹಿತರು ಇದ್ದಾರೆ. ಇನ್ನುಳಿದ ನಾಲ್ಕು ಪಟ್ಟಣ ಪಂಚಾಯ್ತಿಯವರು ನಿವೇಶನ ಹಾಗೂ ವಸತಿ ರಹಿತರ  ಪಟ್ಟಿಯನ್ನು ಸಮರ್ಪಕವಾಗಿ ನೀಡಿರುವುದಿಲ್ಲ.
ಕಡೂರು ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಅಧಿಕವಾಗಿದೆ. ಆದರೆ, ಅವರಿಗೆ ನಿವೇಶನ ಹಂಚಿಕೆ ಮಾಡಲು ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ ಜಮೀನು ಲಭ್ಯವಿಲ್ಲ. ಬೀರೂರು ಪುರಸಭೆಯ ವ್ಯಾಪ್ತಿಯಲ್ಲಿರುವ ಲಕ್ಷ್ಮಯ್ಯ ಬಡಾವಣೆಯಲ್ಲಿ 552 ನಿವೇಶನಗಳಿದ್ದರೂ ಸದರಿ ಬಡಾವಣೆಯ ಬಗ್ಗೆ ನ್ಯಾಯಾಲಯದಲ್ಲಿ  ದಾವೆ ಇರುವುದರಿಂದ ಯಾವುದೇ ಕ್ರಮ ವಹಿಸಲು ಸಾಧ್ಯವಾಗುತ್ತಿಲ್ಲ.
ತರೀಕೆರೆ ಪುರಸಭೆಯಲ್ಲಿ 463 ವಸತಿ ರಹಿತರು ಇದ್ದು, 2013-14ನೇ ಸಾಲಿನಲ್ಲಿ 75 ಫಲಾನುಭವಿಗಳನ್ನು ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಕೊಪ್ಪ ಹಾಗೂ ಎನ್.ಆರ್.ಪುರ ಪಟ್ಟಣ ಪಂಚಾಯ್ತಿಗಳಲ್ಲಿ ಫಲಾನುಭವಿಗಳ ಆಯ್ಕೆ ಬಾಕಿ ಇದ್ದು, ಆಶ್ರಯ ಸಮಿತಿ ಸಭೆ ಈವರೆಗೆ ನಡೆದಿಲ್ಲ.
97 ಫಲಾನುಭವಿಗಳ ಆಯ್ಕೆ: 2013-14ನೇ ಸಾಲಿನಲ್ಲಿ ಜಿಲ್ಲೆಯ 8  ಸ್ಥಳೀಯ ಸಂಸ್ಥೆಗಳಲ್ಲಿ 510 ವಸತಿ  ನಿರ್ಮಾಣದ ಗುರಿಯನ್ನು ಹೊಂದಲಾಗಿತ್ತು. ಆದರೆ, ಈ ಸಾಲಿನಲ್ಲಿ 97 ಮಂದಿಯನ್ನು ಮಾತ್ರ ಆಯ್ಕೆ  ಮಾಡಿಕೊಳ್ಳಲಾಗಿದೆ.
ಚಿಕ್ಕಮಗಳೂರು ನಗರಸಭೆಯಲ್ಲಿ 125, ಕಡೂರು, ಬೀರೂರು, ತರೀಕೆರೆ ಪುರಸಭೆಗಳಲ್ಲಿ ತಲಾ 75, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ ಪಟ್ಟಣ ಪಂಚಾಯ್ತಿಗಳಲ್ಲಿ ತಲಾ 40 ಮಂದಿಗಳನ್ನು ಆಯ್ಕೆ ಮಾಡುವ ಗುರಿ ಹೊಂದಲಾಗಿತ್ತು.
ಬೀರೂರು ಪುರಸಭೆ 22 ಹಾಗೂ ತರೀಕೆರೆ ಪುರಸಭೆ 75 ಮಂದಿಯನ್ನು ವಸತಿ ನಿರ್ಮಾಣಕ್ಕೆ ಆಯ್ಕೆ ಮಾಡಿದೆ. ಇನ್ನುಳಿದ ಸ್ಥಳೀಯ ಸಂಸ್ಥೆಗಳು ಯಾರೊಬ್ಬರನ್ನು ಸಹ ಆಯ್ಕೆ ಮಾಡಿಲ್ಲ.
ಸ್ಥಳೀಯ ಸಂಸ್ಥೆಗಳಲ್ಲಿ ಬಹಳಷ್ಟು ಬಡ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಾಗಿವೆ. ಅವರಿಗೆ ಸ್ವಂತ ಸೂರಿಲ್ಲದೆ ಜೀವನ  ನಿರ್ವಹಣೆ ಕಷ್ಟವಾಗಿದೆ. ಇಂತಹವರಿಗೆ ಅನುಕೂಲ ಮಾಡಿಕೊಡಬೇಕಾದ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಸಮೀಕ್ಷೆಯ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳನ್ನು ಕೈ ಬಿಟ್ಟು, ಪ್ರಭಾವಿಗಳಿಗೆ ಮಣೆ ಹಾಕಲಾಗುತ್ತಿದೆ ಎಂಬ ಮಾತು ಚಿಕ್ಕಮಗಳೂರು ನಗರಸಭೆಯ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ. ಸಮೀಕ್ಷೆಯ ವೇಳೆಯಲ್ಲಿ ಕೆಲವು ನಗರಸಭಾ ಸದಸ್ಯರು ತಮ್ಮ ಬೆಂಬಲಿಗರು  ಹಾಗೂ ಅನರ್ಹರನ್ನು ನಿವೇಶನ ರಹಿತರ ಪಟ್ಟಿಗೆ ಸೇರಿಸಲು ಕರ ವಸೂಲಿಗಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇದರಿಂದಾಗಿ ಕಡು ಬಡವರಿಗೆ ಅನ್ಯಾಯವಾಗಲಿದೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement