ಬಿಜೆಪಿಗೆ ಅತ್ಯಾಚಾರ ಬಗ್ಗೆ ಮಾತನಾಡುವ ಹಕ್ಕಿಲ್ಲ'
ನರಸಿಂಹರಾಜಪುರ: ಅತ್ಯಾಚಾರ ಪ್ರಕರಣಗಳ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಂ.ಆರ್.ರವಿಶಂಕರ್ ಹೇಳಿದ್ದಾರೆ.
ಈ ಹಿಂದೆ ಅಧಿಕಾರ ನಡೆಸಿದ್ದ ಬಿಜೆಪಿ ಮಹಿಳೆಯರನ್ನು ಯಾವ ರೀತಿ ನಡೆಸಿಕೊಂಡಿತ್ತು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ವಿಧಾನಸಭೆಯಲ್ಲೇ ಬಿಜೆಪಿ ಮಂತ್ರಿಗಳು ನೀಲಿ ಚಿತ್ರ ವೀಕ್ಷಿಸಿದರು. ಬಿಜೆಪಿ ಸರ್ಕಾರದ 6 ವರ್ಷದ ಆಡಳಿತಾವಧಿಯಲ್ಲಿ ಮಾಜಿ ಮಂತ್ರಿಗಳು, ಶಾಸಕರು, ಪದಾಧಿಕಾರಿಗಳು ಅತಿ ಹೆಚ್ಚು ಲೈಂಗಿಕ ಹಗರಣಗಳಲ್ಲಿ ಸಿಕ್ಕಿಹಾಕಿ ಕೊಂಡಿದ್ದರು ಎಂದು ಅವರು ಪ್ರಸ್ತಾಪಿಸಿದರು.
ದಿಟ್ಟ ಹೆಜ್ಜೆ: ರಾಜ್ಯದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ಖಂಡನೀಯ. ಕಾಂಗ್ರೆಸ್ ಸರ್ಕಾರ
ಅತ್ಯಾಚಾರ ಪ್ರಕರಣ ತಡೆಯಲು ದಿಟ್ಟ ಹೆಜ್ಜೆ ಇಟ್ಟಿದೆ. ಶಾಲಾ ಕಾಲೇಜು ಮತ್ತು ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ವಿಶೇಷ ಭದ್ರತೆ ಒದಗಿಸಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಈಗಾಗಲೇ ನಿರ್ದೇಶನ ನೀಡಿದೆ. ಸರ್ಕಾರದೊಂದಿಗೆ ಸಾರ್ವಜನಿಕರೂ ಸಹಕಾರ ನೀಡಿದರೆ ಮಾತ್ರ ಈ ಪಿಡುಗನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.