ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಹಿತಿ ಸರ್ಕಾರದ ಸ್ಥಾನಮಾನಕ್ಕೆ ಆಸೆಪಡದೆ ಸಮಾಜ ತಿದ್ದುವ ಕೆಲಸಕ್ಕೆ ಮುಂದಾಗಲಿ: ನಾಡಿ

Rashmi Kasaragodu
Updated On : 26 Jul 2014, 11:11 am

ಬೀರೂರು (ಅಜ್ಜಂಪುರ ಸೂರಿ ವೇದಿಕೆ): ಸಾಹಿತಿಗಳು ಸರ್ಕಾರದ ಸ್ಥಾನಮಾನಗಳಿಗೆ ಆಸೆ ಪಡದೆ ಸಮಾಜ ತಿದ್ದುವ ಕೆಲಸಕ್ಕೆ ಮುಂದಾಗಿ ತಮ್ಮ ಸಾಹಿತ್ಯ ಬರಹದ ಮೂಲಕ ಎಲ್ಲೆ ಮೀರಿದ ಭ್ರಷ್ಟಾಚಾರ,ಅತ್ಯಾಚಾರಗಳನ್ನು ಖಂಡಿಸಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು ಎಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಸಾಹಿತಿ ನಾ.ಡಿಸೋಜ ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆರಂಭವಾದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಾಹಿತಿಗಳು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬ ಸೂಕ್ಷ್ಮ ಚಿಂತನೆ ಅಳವಡಿಸಿಕೊಂಡು ಅದನ್ನು ಬರಹ ಮೂಲಕ ವ್ಯಕ್ತಪಡಿಸುತ್ತಾರೆ. ಆದರೆ ಇಂದಿನ ವ್ಯವಸ್ಥೆ ಕಂಡು ಸಾಹಿತಿಗಳಿಗೆ ಒಂದು ರೀತಿಯ ದುಗುಡ ಮನೆ ಮಾಡಿದೆ ಎಂದು ವಿಷಾದಿಸಿದರು.
ಸಾಮಾಜಿಕ, ಧಾರ್ಮಿಕವಾಗಿ ದೇಶವನ್ನು ಸರಿಪಡಿಸುವ ಕೆಲಸವನ್ನು ಇಂಜಿನಿಯರ್ ಅಥವಾ ವೈದ್ಯ ಮಾಡಲು ಸಾಧ್ಯವಿಲ್ಲ. ಈ ಕೆಲಸವನ್ನು ಸಾಹಿತಿ ಮಾತ್ರ ಮಾಡಲು ಸಾಧ್ಯ ಎಂದ ಡಿಸೋಜ, ಈ ನಿಟ್ಟಿನಲ್ಲಿ ಚಿಂತನೆ ಮಾಡದ ಸಾಹಿತಿ ಜನರ ಮತು ದೇಶದ ದೃಷ್ಟಿಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾನೆ ಎಂದು ಅಭಿಪ್ರಾಯಪಟ್ಟರು.
ಪಾಕ್ ಕವಿ ಅಗರ್‌ವಾಲ್ ಕವಿವಾಣಿಯಂತೆ ರಾಜಕಾರಣಿಗಳಿಗೆ ಹತ್ತು ಚಾಟಿಯೇಟು, ಧರ್ಮಾಧಿಕಾರಿಗೆ 100 ಚಾಟಿಯೇಟು, ಲೇಖಕ, ಕಲಾವಿದರಿಗೆ ಸಾವಿರ ಚಾಟಿ ಏಟು ಎಂದು ಉದಾಹರಿಸಿ ಹೇಳಿದ ಅವರು, ಈ ನಿಟ್ಟಿನಲ್ಲಿ ಸಾಹಿತಿಗಳು ಸಮಾಜದ ಚಿಂತನೆ ಮಾಡಬೇಕೇ ಹೊರತು ಬೀಗಬಾರದು. ಸರ್ಕಾರದ ಸ್ಥಾನಮಾನಗಳಿಗೆ ಆಸೆಪಡಬಾರದು. ಸಾಹಿತಿಯಾದವರು ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಬೇಕು ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿದ್ದ ಈ ಸಮ್ಮೇಳನ ಸಮಯದ ಅಭಾವ ಮತ್ತು ಮಳೆಯ ಕಾರಣದಿಂದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ. ಕೆಲವೊಂದು ಅವ್ಯವಸ್ಥೆ ಉಂಟಾಗಿರಬಹುದು. ಇದನ್ನು ದೊಡ್ಡದು ಮಾಡುವುದ ಬೇಡ ಎಂದು ಮನವಿ ಮಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement