ಮಧ್ಯರಾತ್ರಿಯಿಂದಲೇ ನಾಲೆಗೆ ನೀರು
ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನಿಟ್ಟುಸಿರು ಬಿಡುವ ಸಮಯ ಬಂದಿದ್ದು, ಭಾನುವಾರ ಮಧ್ಯರಾತ್ರಿಯಿಂದಲೇ ಮುಂಗಾರು ಹಂಗಾಮಿಗಾಗಿ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ನೀರು ಹರಿಯಲಿದೆ. ಶನಿವಾರ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಈ ತೀರ್ಮಾನ ಕೈಗೊಂಡಿದೆ.
ಮುಂಗಾರು ಹಂಗಾಮಿನ ಆರಂಭದ ದಿನಗಳಲ್ಲಿ ಮಳೆ ಕಡಿಮೆಯಾಗಿದ್ದರಿಂದ ಹಿಂದಿನ ಸಭೆಯಲ್ಲಿ ಭತ್ತ ಬೆಳೆಯದಂತೆ ರೈತರಿಗೆ ಸಲಹೆ ನೀಡಲಾಗಿತ್ತು. ನಂತರ ವ್ಯಾಪಕ ಮಳೆಯಾಗಿದ್ದು, ಜಲಾಶಯದಲ್ಲಿ 52.09 ಟಿಎಂಸಿ ನೀರು ಸಂಗ್ರಹವಾಗಿದೆ. ಅಲ್ಲದೇ ಮಲೆನಾಡಿನಾದ್ಯಂತ ಉತ್ತಮ ಮಳೆ ಮುಂದುವರಿದಿದೆ. ಹಾಗಾಗಿ ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನಿಸಲಾಯಿತು.
ಸಲಹಾ ಸಮಿತಿ ಸಭೆಯಲ್ಲಿ ಸದಸ್ಯರ ಈ ಕುರಿತಂತೆ ಚರ್ಚಿಸಿ 106 ದಿನ ನೀರು ಹರಿಸಲು ನಿರ್ಧರಿಸಲಾಯಿತು. ಈ ದಿನಗಳ ನಡುವೆ ಒಟ್ಟು 10 ದಿನ ಬಿಡುವು ಕೊಡುವುದರಿಂದ ಒಟ್ಟು 116 ದಿನ ವಿಸ್ತರಣೆಯಲ್ಲಿ ರೈತರಿಗೆ ನೀರು ಸಿಗಲಿದೆ. ಜು.27ರ ಮಧ್ಯರಾತ್ರಿಯಿಂದ ನವೆಂಬರ್ 21ರ ವರೆಗೆ ನೀರು ಸಿಗಲಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೆ ಸತತ ನೀರು ಹರಿಸುವುದಕ್ಕೂ ಸಭೆಯಲ್ಲಿ ಒಪ್ಪಿಗೆ ಸಿಕ್ಕಿತು. ಕಾಡಾ ಆಡಳಿತಾಧಿಕಾರಿ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ನೀಡಿದ ಮಾಹಿತಿಯಂತೆ ಜಲಾಶಯದಲ್ಲಿ ಜು.26 ರಂದು 167.3 ಅಡಿ, ಅಂದರೆ 52.09 ಟಿಎಂಸಿ ನೀರು ಇದೆ. ಡೆಡ್ ಸ್ಟೋರೇಜ್ 13.83 ಟಿಎಂಸಿ ನೀರು ಹಾಗೂ ಕುಡಿಯುವ ಉದ್ದೇಶಕ್ಕಾಗಿ 6 ಟಿಎಂಸಿ ಉಳಿಸಿಕೊಂಡರೆ ಕೃಷಿಗೆ 32.26 ಟಿಎಂಸಿ ನೀರು ಸಿಗಲಿದೆ.
ಆಡಳಿತಾಧಿಕಾರಿ ಅಣ್ಣಯ್ಯ ಅವರು, ಜಲಾಶಯದ ನೀರು ಬೇಸಿಗೆಗೂ ಅಗತ್ಯವಿದೆ. ಮುಂಗಾರು ಹಂಗಾಮಿನ ಬಳಿಕ ಬೇಸಿಗೆ ಬೆಳೆಗೆ ನೀರು ಕೊಡಲು 56 ಟಿಎಂಸಿ ಉಳಿಸಿಕೊಳ್ಳಬೇಕು. ನೀರನ್ನು ವ್ಯರ್ಥ ಮಾಡದಂತೆ ಬಳಸಲು ರೈತರಲ್ಲಿ ಜಾಗೃತಿ ಮೂಡಿಸುವಂತೆ ಸದಸ್ಯರಲ್ಲಿ ಕೋರಿದರು.
ಸಭೆಯಲ್ಲಿ ಸದಸ್ಯ ಕಾರ್ಯದರ್ಶಿ, ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಫಣಿರಾಜ್, ದಾವಣಗೆರೆ ಜಿಲ್ಲಾಧಿಕಾರಿ ಅಂಜನ್‌ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ನಾರಾಯಣಪ್ಪ, ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಸೇರಿದಂತೆ ಹಲವು ಸದಸ್ಯರು ಇದ್ದರು.
ಹೀಗಿದೆ ವೇಳಾಪಟ್ಟಿ
ಹರಿಯುವ ದಿನಗಳು-
ಜು.27ರಿಂದ ಸೆ.10ರ ವರೆಗೆ (45ದಿನ)
ನಿಲ್ಲುವ ದಿನಗಳು-
ಸೆ.11ರಿಂದ ಸೆ.15ರ ವರೆಗೆ (5 ದಿನ)
ಹರಿಯುವ ದಿನ-
ಸೆ.16ರಿಂದ ಅ.20ರ ವರೆಗೆ (35 ದಿನ)
ನಿಲ್ಲುವ ದಿನ-
ಅ.21ರಿಂದ ಅ.25ರ ವರೆಗೆ (5 ದಿನ)
ಹರಿಯುವ ದಿನ-
ಅ.26ರಿಂದ ನ.21ರ ವರೆಗೆ (26 ದಿನ)