ಪಶ್ಚಿಮ ಘಟ್ಟ ಕಾಂಕ್ರಿಟ್ ಕಾಡಾಗದಿರಲಿ
ಚಿಕ್ಕಮಗಳೂರು: ಭದ್ರಾ ಹುಲಿ ಯೋಜನೆ ಹೆಸರಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿ ಪರಿಸರವಾದಿಗಳೆಂದು ಹೇಳಿಕೊಳ್ಳುವ ಕೆಲವು ಪಟ್ಟಭದ್ರರ ಹುನ್ನಾರವನ್ನು ಬೆಳೆಗಾರರ ಸಂಘದ ಪರವಾಗಿ ಖಂಡಿಸುವುದಾಗಿ ತಿಳಿಸಿರುವ ಅಖಿಲ ಕರ್ನಾಟಕ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಅವರ ಹೇಳಿಕೆಯೇ ಅಪ್ರಬುದ್ಧವಾಗಿದೆ ಎಂದು ಪರಿಸರಾಸಕ್ತ ಡಿ.ವಿ. ಗಿರೀಶ್, ಶ್ರೀದೇವು ಹುಲಿಕೆರೆ ಮತ್ತು ಎಸ್. ಗಿರಿಜಾಶಂಕರ ಆರೋಪಿಸಿದ್ದಾರೆ.
ಅವಸರದ ಹೇಳಿಕೆ: ರಾಷ್ಟ್ರೀಯ ಹಸಿರು ಪ್ರಾಧಿಕಾರದ ಮುಂದೆ ರೆಸಾರ್ಟ್ ಮತ್ತು ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪೂರ್ಣವಾಗಿ ಓದದೆ ಅಥವಾ ಓದಿದರೂ ಅರ್ಥ ಮಾಡಿಕೊಳ್ಳದೆ ನೀಡಿರುವ ಅವಸರದ ಹೇಳಿಕೆ ಎಂದು ಹೇಳದೆ ವಿಧಿ ಇಲ್ಲ ಎಂದಿದ್ದಾರೆ.
ಹಸಿರು ಪ್ರಾಧಿಕಾರಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಎಲ್ಲೂ ಸಹ ಹೋಂ ಸ್ಟೇಗಳ ವಿಷಯವನ್ನೆ ಪ್ರಸ್ತಾಪಿಸಿಲ್ಲ. ಕಾಫಿ ಬೆಳೆಗಾರರ ಇಂದಿನ ಪರಿಸ್ಥಿತಿ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೊಲದಗದ್ದೆ ಗಿರೀಶ್ ತಾವೇ ಗುತ್ತಿಗೆ ತೆಗೆದುಕೊಂಡಂತೆ ತಮ್ಮ ಹೇಳಿಕೆಯಲ್ಲಿ ಮಾತನಾಡಿದ್ದಾರೆ.
ಆದರೆ, ಕಾಫಿ ಬೆಳೆಗಾರರ ಸಂಕಷ್ಟಗಳ ಬಗ್ಗೆ ಪರಿಸರದ ಬಗ್ಗೆ ಧ್ವನಿ ಎತ್ತಿರುವ ನಮಗೂ ಪೂರ್ಣ ಅರಿವಿದೆ. ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿರುವ ಮೂವರಲ್ಲಿ ಇಬ್ಬರು ಕಾಫಿ ಬೆಳೆಗಾರರ ಮನೆತನದಲ್ಲೆ ಹುಟ್ಟಿ ಬೆಳೆದು ಬಂದವರು. ಹಾಗಾಗಿ ತಮ್ಮ ಬುಡಕ್ಕೆ ತಾವೇ ಕೊಡಲಿ ಹಾಕಿಕೊಳ್ಳುವುದಿಲ್ಲ ಎಂಬುದನ್ನು ಗಿರೀಶ್ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹೋಂ ಸ್ಟೇಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ: ಹೋಂ ಸ್ಟೇಗಳು ಸಕ್ರಮ ಕಾನೂನಿನಡಿ ಚಾಲನೆಯಲ್ಲಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅರ್ಜಿಯಲ್ಲಿ ಹೇಳಿಲ್ಲ ಅಥವಾ ಕಾನೂನನ್ನು ಪೂರ್ತಿಯಾಗಿ ಅನುಸರಿಸಿ ನಡೆಯುತ್ತಿರುವ ಹೋಂ ಸ್ಟೇಗಳ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ಅರ್ಜಿಯಲ್ಲಿ ಹೋಂ ಸ್ಟೇಗಳ ಬಗ್ಗೆ ಪ್ರಸ್ತಾಪವನ್ನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಪ್ರಾಧಿಕಾರಕ್ಕೆ ಸಲ್ಲಿಸಿರುವ ಅರ್ಜಿಯನ್ನು ಅರ್ಥ ಮಾಡಿಕೊಳ್ಳದೆ ಗಿರೀಶ್ ಮನಸೋ ಇಚ್ಛೆ ಪರಿಸರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಟೀಕೆ ಮಾಡಿ ಅವರ ಹೇಳಿಕೆಯನ್ನೆ ಹಾಸ್ಯಾಸ್ಪದಗೊಳಿಸಿ ಕೊಂಡಿದ್ದಾರೆ. ಪಶ್ಚಿಮಘಟ್ಟದ ಭಾಗವಾಗಿರುವ ಬಾಬಾಬುಡನ್ಗಿರಿ ಮತ್ತು ಮುಳ್ಳಯ್ಯನಗಿರಿ ಶ್ರೇಣಿಗಳು ಅತ್ಯಂತ ಸೂಕ್ಷ್ಮ ಪ್ರದೇಶದ ಜೀವಿ ಪರಿಸರ ಹೊಂದಿರುವ ಸ್ಥಳಗಳಾಗಿವೆ.
ಈ ಸ್ಥಳದಲ್ಲಿ ದೊಡ್ಡ ಮಟ್ಟದ ರೆಸಾರ್ಟ್ಗಳ ನಿರ್ಮಾಣ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗೂ ಅಲ್ಲಿ ನೈಸರ್ಗಿಕವಾಗಿ ಹರಿಯುವ ನೀರಿನ ಮೂಲಗಳನ್ನೆ ಈ ರೆಸಾರ್ಟ್ಗಳು ಮುಂದಿನ ದಿನದಲ್ಲಿ ಉಪಯೋಗಿಸಲು ಆರಂಭಿಸಿದಾಗ ಬೆಟ್ಟದ ತಡಿಯಲ್ಲಿರುವ ಗ್ರಾಮಗಳ ಹಾಗೂ ಅವುಗಳ ಸುತ್ತಮುತ್ತ ಇರುವ ಕಾಫಿ ಕೃಷಿ ಸೇರಿದಂತೆ ಇತರೆ ಕೃಷಿ ಜಮೀನಿಗೆ ನೀರಿನ ಪ್ರಮಾಣದಲ್ಲಿ ಬಹಳಷ್ಟು ಕಡಿತವುಂಟಾಗುವ ಅಪಾಯವಿರುವುದರಿಂದ ಈ ರೀತಿ ರೆಸಾರ್ಟ್ಗಳ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ವಿರೋಧಿಸಲಾಗಿದೆ.
ಗಿರೀಶ್ ಅಜ್ಞಾನ ಪ್ರದರ್ಶನ: ಈ ವಿರೋಧದಲ್ಲಿ ಬೆಳೆಗಾರರ ಹಾಗೂ ಸ್ಥಳೀಯ ಜನರ ಹಿತಾಸಕ್ತಿಯ ರಕ್ಷಣೆ ಇದೆಯೇ ಹೊರತು, ಇದರಲ್ಲಿ ಯಾವುದೇ ವೈಯಕ್ತಿಕ ಲಾಭವಿಲ್ಲ. ಪ್ರಾಣಿ, ಪಕ್ಷಿಗಳ ಆವಾಸ ತಾಣವಾಗಿರುವ ಪಶ್ಚಿಮಘಟ್ಟ ಕಾಂಕ್ರಿಟ್ ಕಾಡಾಗಬಾರದೆಂಬ ಏಕೈಕ ಉದ್ದೇಶ ಹಾಗೂ ಮುಂದಿನ ಪೀಳಿಗೆಗೂ ಈ ಪ್ರದೇಶ ಸಂಮೃದ್ಧವಾಗಿ ಇರಬೇಕೆಂಬ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಗಿರೀಶ್ ವಿಚಿತ್ರ ಹೇಳಿಕೆ ನೀಡಿ ತಮ್ಮ ಅಜ್ಞಾನ ಪ್ರದರ್ಶಿಸಿ ಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಪರಿಸರದ ಮೇಲೆ ಪರಿಣಾಮ
ಸ್ಥಳೀಯರೆ ಹೋಂ ಸ್ಟೇಗಳನ್ನು ನಡೆಸಿದಲ್ಲಿ ಅದಕ್ಕೊಂದು ಅರ್ಥವಿದೆ ಹಾಗೂ ಅವುಗಳಿಂದ ಪರಿಸರಕ್ಕೆ ಹಾನಿಯಾಗದಂತೆ ನಿಗಾವಹಿಸುವರೆಂಬ ವಿಶ್ವಾಸವಿದೆ. ಆದರೆ, ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಹೋಂ ಸ್ಟೇಗಳನ್ನು ನಡೆಸುವುದು ಅಥವಾ ಹೋಂ ಸ್ಟೇ ಹೆಸರಿನಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಒಂದು ರೀತಿ ವಸತಿ ಗೃಹವಾಗಿಸುವುದು ಈ ಸೂಕ್ಷ್ಮ ಪ್ರದೇಶದಲ್ಲಿ ಆ ಪರಿಸರಕ್ಕೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆಯೇ ಹೊರತು, ಅದು ಆ ಪರಿಸರದ ಸೂಕ್ಷ್ಮತೆಗಳಿಗೆ ಪೂರಕವಾಗಿ ಇರುವುದಿಲ್ಲ. ಇದನ್ನು ಸಹ ಸ್ಥಳೀಯರು ಆಲೋಚಿಸ ಬೇಕೆಂದು ಹೇಳಿದ್ದಾರೆ.
ಗಿರೀಶ್ ಅಜ್ಞಾನ ಪ್ರದರ್ಶನ: ಈ ವಿರೋಧದಲ್ಲಿ ಬೆಳೆಗಾರರ ಹಾಗೂ ಸ್ಥಳೀಯ ಜನರ ಹಿತಾಸಕ್ತಿಯ ರಕ್ಷಣೆ ಇದೆಯೇ ಹೊರತು, ಇದರಲ್ಲಿ ಯಾವುದೇ ವೈಯಕ್ತಿಕ ಲಾಭವಿಲ್ಲ. ಪ್ರಾಣಿ, ಪಕ್ಷಿಗಳ ಆವಾಸ ತಾಣವಾಗಿರುವ ಪಶ್ಚಿಮಘಟ್ಟ ಕಾಂಕ್ರಿಟ್ ಕಾಡಾಗಬಾರದೆಂಬ ಏಕೈಕ ಉದ್ದೇಶ ಹಾಗೂ ಮುಂದಿನ ಪೀಳಿಗೆಗೂ ಈ ಪ್ರದೇಶ ಸಂಮೃದ್ಧವಾಗಿ ಇರಬೇಕೆಂಬ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ಗಿರೀಶ್ ವಿಚಿತ್ರ ಹೇಳಿಕೆ ನೀಡಿ ತಮ್ಮ ಅಜ್ಞಾನ ಪ್ರದರ್ಶಿಸಿ ಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.