ಸಮಾನಾಂತರ ಬೆಲೆ ಕಾಯ್ದುಕೊಳ್ಳಲು ಕ್ರಮ: ಡಾ.ಪ್ರಕಾಶ್
ಶಿವಮೊಗ್ಗ: ದಿಢೀರ್ ಬೆಲೆ ಏರಿಕೆ ಅಥವಾ ಇಳಿಕೆಯಾಗುವ ವಿವಿಧ 8 ಪದಾರ್ಥಗಳಾದ ಟೊಮೆಟೋ, ಆಲೂಗೆಡ್ಡೆ, ಈರುಳ್ಳಿ, ರಾಗಿ, ಭತ್ತ, ಮೆಕ್ಕೆಜೋಳ, ಅಡಕೆ, ಕೊಬ್ಬರಿ ಈ ಬೆಳೆಗಳ ಮೇಲೆ ನಿಗಾ ವಹಿಸಲಾಗುತ್ತಿದ್ದು, ಬೆಲೆಗಳ ಏರಿಳಿತ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಬೆಲೆ ಆಯೋಗ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಅಥವಾ ಇನ್ನಾವುದೆ ಚಟುವಟಿಕೆಯನ್ನು ನಿಯಂತ್ರಿಸಿ, ಸಮಾನಾಂತರ ಬೆಲೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಡಕೆ ಬೆಳೆಗೂ ವಿಸ್ತರಣೆ: ಈಗಾಗಲೇ ಕೊಬ್ಬರಿ ಉತ್ಪನ್ನಕ್ಕೆ ಇ-ಮಾರುಕಟ್ಟೆ ಸೌಲಭ್ಯ ಇದ್ದು, ಇದನ್ನು ಅಡಕೆ ಬೆಳೆಗೂ ವಿಸ್ತರಿಸುವ ಚಿಂತನೆ ಇದೆ. ಈ ಮೂಲಕ ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ಒದಗಿಸಲು ಸಾಧ್ಯವಿದೆ ಎಂದು ತಿಳಿಸಿದರು.
ರೈತರು ಮಾಡಿದ ಖರ್ಚಿಗಿಂತ ಹೆಚ್ಚುವರಿ ಶೇಖಡ 50ರಷ್ಟು ಲಾಭ ತರಿಸುವುದು ಕರ್ನಾಟಕ ಕೃಷಿ ಬೆಲೆ ಆಯೋಗದ ಗುರಿ ಎಂದ ಅವರು, ರೈತರಿಗೆ ಗ್ರಾಹಕರ ಬೆಲೆಯಲ್ಲಿ ಗರಿಷ್ಠ ಪಾಲು ಖಚಿತ ಪಡಿಸುವುದು, ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿ, ಆಹಾರ ಭದ್ರತಾ ಅಗತ್ಯಗಳನ್ನು ಪೂರೈಸುವ ಮೂಲಕ ಕೃಷಿಕರಿಗೆ ತಾನು ಉತ್ಪಾದಿಸುವ ಉತ್ಪನ್ನಗಳಿಗೆ ಆದ ಖರ್ಚಿಗಿಂತ ಹೆಚ್ಚುವರಿ ಅಧಿಕ ಲಾಭ ತಂದುಕೊಡುವುದು ಆಯೋಗದ ಪ್ರಮುಖ ಉದ್ಧೇಶವಾಗಿದೆ ಎಂದು ವಿವರಿಸಿದರು.
ಕೃಷಿ ಉತ್ಪನ್ನಗಳಿಗೆ ಪ್ರತಿಫಲ ಬೆಲೆ ಒದಗಿಸಿ, ಮಾರುಕಟ್ಟೆಯ ಮೂಲಸೌಕರ್ಯವನ್ನು ಉತ್ತಮಗೊಳಿಸಬೇಕಿದೆ. ಈ ಮೂಲಕ ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕಾಗಿ ಮಾರುಕಟ್ಟೆ ಸುಧಾರಣೆಯಾಗಿ ಇ-ವ್ಯಾಪಾರ ವ್ಯವಸ್ಥೆ ಮೂಲಕ ಕೃಷಿ ಸಮುದಾಯದ ಎಲ್ಲಾ ವರ್ಗ, ಪ್ರದೇಶಗಳಿಗೆ ಲಾಭ ತಂದುಕೊಡಲಾಗುವುದು ಎಂದು ಹೇಳಿದರು. ಕರ್ನಾಟಕ ಕೃಷಿ ಬೆಲೆ ಆಯೋಗ ರೈತರ ಸಹಭಾಗಿತ್ವದಲ್ಲಿ ಅವರ ಅನುಕೂಲಕ್ಕಾಗಿಯೇ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ತರಲಾಗಿದೆ. ಈ ವ್ಯವಸ್ಥೆಯಲ್ಲಿ ಯಶಸ್ವಿಯೂ ಆಗಲಿರುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಮಾರುಕಟ್ಟೆ ಸಮಿತಿಗೆ ರೈತರು ಬೆಳೆದ ಉತ್ಪನ್ನಗಳ ಶೇ.50ರಷ್ಟು ಮಾತ್ರ ಬರುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ರೈತರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಾರಾಟ ವ್ಯವಸ್ಥೆಯಲ್ಲಿ ತರಲಾಗಿದೆ. ಆದರೆ ರೈತರು ತೆರಿಗೆ ಭಯದಿಂದ ಮಾರುಕಟ್ಟೆಗೆ ಉತ್ಪನ್ನಗಳನ್ನು ತರುತ್ತಿಲ್ಲ ಎಂದು ನುಡಿದರು.
ಆಯೋಗ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲಿದೆ. ಇಲಾಖೆಗಳ ನಡುವಿನ ಅಂತರ ಕಡಿಮೆ ಮಾಡಲು ಪ್ರಯತ್ನಿಸಲಿದೆ. ಈ ಮೂಲಕ ರೈತರ ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಮಾರಾಟ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ. ಈ ವಿಷಯವಾಗಿ ಆಯೋಗ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ತಿಳಿಸಿದರು.