ದುರ್ಯೋದನ, ದುಶ್ಯಾಸನರು ಕೆಲವರಲ್ಲಿ ಜೀವಂತ
ಕ.ಪ್ರ. ವಾರ್ತೆ, ಶಿವಮೊಗ್ಗ, ಜುಲೈ 28
ರಾಮಾಯಣ ಮತ್ತು ಮಹಾಭಾರತ ಗ್ರಂಥಗಳನ್ನು ಓದುತ್ತಾ ಬೆಳೆದವರಲ್ಲಿ ಹಿಂಸಾನಂದ ಪ್ರವೃತ್ತಿ ಹೆಚ್ಚಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಮಲ್ಲಿಕಾ ಘಂಟಿ ಹೇಳಿದ್ದು, ಇವು ಅತ್ಯಾಚಾರದ ಕೂಪಗಳಾಗಿವೆ ಎಂದರು.
ಎನ್‌ಎಸ್‌ಯುಐ ಸಂಘಟನೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು, ಅತ್ಯಾಚಾರ, ಶೋಷಣೆ ಪುರಾತನ ಕಾಲದಿಂದಲೂ ಬಂದ ಸಮಸ್ಯೆ. ಈಗ ಆಧುನಿಕ ಸಮಸ್ಯೆಯಾಗಿ ಕಾಡುತ್ತಿದೆ ಎಂದರು.
ಪುರಾಣ ಬಿಟ್ಟು ಇನ್ನೂ ಕೆಲವರು ಆಧುನಿಕ ಭಾರತಕ್ಕೆ ಬಂದಿಲ್ಲ. ಪುರಾಣದಲ್ಲಿನ ದುರ್ಯೋಧನ, ದುಶ್ಯಾಸನರು ಕೆಲವರಲ್ಲಿ ಇನ್ನೂ ಜೀವಂತವಾಗಿರುವುದನ್ನು ಕಾಣಬಹುದಾಗಿದೆ. ಪುರಾಣ ಬಿಟ್ಟು ಅಧುನಿಕ ಭಾರತಕ್ಕೆ ಬಂದರೆ ಮಾತ್ರ ನಾಗರಿಕರಾಗಿ ಬದುಕಬಹುದು ಎಂದು ಹೇಳಿದರು.
ರಾಜ್ಯವೇ ತಲ್ಲಣಗೊಳ್ಳುವಂತಹ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಡೆಯಲು ಇಡೀ ಸಮಾಜವೇ ಜಾಗೃತಗೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ ಮಾನಸ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕೇವಲ ಸರ್ಕಾರ ಹಾಗೂ ಪೊಲೀಸರ ಕೆಲಸವಲ್ಲ. ಮಹಿಳೆಯರು ಸಹ ಸ್ವಯಂರಕ್ಷಣೆಯತ್ತ ಗಮನ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ಮುಖಂಡ ಕೆ. ದೇವೇಂದ್ರಪ್ಪ, ಕಾಶಿ ವಿಶ್ವನಾಥ್, ಸಿ.ಜಿ. ಮಧುಸೂದನ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕೆ. ಚೇತನ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.