ರಂಜಾನ್ ಹಬ್ಬಕ್ಕೆ ಸಚಿವರು, ಮುಖಂಡರ ಶುಭಾಶಯ
ಚಿಕ್ಕಮಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಜಿಲ್ಲೆಯ ಮುಸ್ಲಿಂರಿಗೆ ಯುವಜನ ಸೇವಾ ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಸೇರಿದಂತೆ ವಿವಿಧ ಗಣ್ಯರು ಶುಭಾಶಯ ಕೋರಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ. ರವಿ, ಬಿ.ಬಿ. ನಿಂಗಯ್ಯ, ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಅವರು ಸುಖ, ಸಂತಸ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.
ಸಾಹಿತ್ಯ ಅಕಾಡೆಮಿ ಸುವರ್ಣ ಸಂಭ್ರಮ ಆ.3ಕ್ಕೆ
ಶಿವಮೊಗ್ಗ: ಕರ್ನಾಟಕ ಸಾಹಿತ್ಯ ಅಕಾಡೆಮಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಗಸ್ಟ್ 3ರಂದು ಸುವರ್ಣ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಈ ವಿಷಯ ತಿಳಿಸಿ, ಅಂದು ಕಾರ್ಯಕ್ರಮವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ. ನಾರಾಯಣ ಉದ್ಘಾಟಿಸುವರು ಎಂದು ತಿಳಿಸಿದರು.ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕರ್ನಾಟಕ ಸಾಹಿತ್ಯ ಅಕಾಡಮಿ ಪೂರ್ವಾಧ್ಯಕ್ಷರಿಗೆ ಗೌರವ ಸಮರ್ಪಿಸಲಿದ್ದಾರೆ ಎಂದರು.
ಅಕಾಡೆಮಿಯ ಪೂರ್ವ ಇತಿಹಾಸವನ್ನು ಒಳಗೊಂಡ ಅಪರೂಪದ ಮಾಹಿತಿಯುಳ್ಳ, ಸಂಗ್ರಹ ಯೋಗ್ಯ ಅಕಾಡಮಿ 50 ಹೆಜ್ಜೆ ಗುರುತು ಪುಸ್ತಕವನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಪುಲ್ಬನ್ಸಲ್ ಬಿಡುಗಡೆ ಮಾಡುವರು. ಅಕಾಡೆಮಿ ಪ್ರಕಟಿತ ತ್ರೈಮಾಸಿಕ ಪತ್ರಿಕೆ ಅನುಕೇತನ ಹಾಗೂ ವಾರ್ತಾ ಸಂಚಿಕೆಗಳ ಮರುಚಾಲನೆ ಕೂಡ ಸಮಾರಂಭದಲ್ಲಿ ಕೈಗೊಳ್ಳಲಾಗುವುದು. ಮಧ್ಯಾಹ್ನ ಕನ್ನಡ ಸಾಹಿತ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ- ಭಾರತ ಸಂವಿಧಾನ ವಿಷಯವಾಗಿ ಸಂವಾದ ನಡೆಯಲಿದೆ. ವಿಮರ್ಶಕ ಡಾ. ರಾಜೇಂದ್ರ ಚೆನ್ನಿ, ಸಾಹಿತಿ ಡಾ. ಕೆ. ಮರುಳುಸಿದ್ದಪ್ಪ, ಡಾ. ವಿದ್ಯಾಸಾಗರ್, ಡಾ. ಮೇಟಿ ಮಲ್ಲಿಕಾರ್ಜುನ, ವಿ.ಎನ್. ವೆಂಕಟಲಕ್ಷ್ಮಿ ಭಾಗವಹಿಸಲಿದ್ದಾರೆ. ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಸಾಹಿತ್ಯ ಅಕಾಡಮಿ 19ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಕಾಡೆಮಿ ಮೂಲಕ ಸಾಹಿತ್ಯವನ್ನು ವಿಸ್ತರಿಸುವ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಾಧಕಿಯರೊಂದಿಗೆ ಸಂವಾದ, ಜನ್ಮ ಶತಮಾನೋತ್ಸವಗಳ ಆಚರಣೆ, ಕನ್ನಡದ ಆಯ್ದ ನೂರು ಉತ್ತಮ ಕಥೆ ಹಾಗೂ ಕವಿತೆಗಳನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ಅನುವಾದಿಸುವ ಪ್ರಕ್ರಿಯೆ, ಮಲೆಯಾಳಂ, ತಮಿಳು, ಮರಾಠಿ ಸೇರಿದಂತೆ ಇತರ ಭಾಷಾ ಸಾಹಿತ್ಯಗಳೊಂದಿಗೆ ವಿನಿಮಯ ಕಾರ್ಯಕ್ರಮ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಲತಿ ಪಟ್ಟಣಶೆಟ್ಟಿ ತಿಳಿಸಿದರು. ನವೆಂಬರ್ ತಿಂಗಳಿನಲ್ಲಿ ಒಂದೇ ದಿನದಲ್ಲಿ 30 ಜಿಲ್ಲೆಗಳಲ್ಲೂ ಕವಿಗೋಷ್ಠಿ ಹಮ್ಮಿಕೊಳ್ಳುವ ಚಿಂತನೆಯಿದೆ. ಹೀಗೆ ಯುವ ಪೀಳಿಗೆ, ಮಹಿಳೆ ಹಾಗೂ ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಕಾಡೆಮಿ ಮುಂದಾಗಿದೆ ಎಂದು ಹೇಳಿದರು. ಅಕಾಡೆಮಿ ರಿಜಿಸ್ಟ್ರಾರ್ ಭಾಗ್ಯ, ಸದಸ್ಯ ಸಂಚಾಲಕ ಡಾ. ಕುಂಸಿ ಉಮೇಶ್ ಮತ್ತಿತರರು ಇದ್ದರು.