ಹಳತಿನಿಂದ ಹೊಸ ಸೃಷ್ಟಿಯೇ ಉತ್ತಮ ನಡೆ: ಪ್ರೊ.ನಾಗರಾಜ್
ಶಿರಾಳಕೊಪ್ಪ: ಬದಲಾವಣೆ ಎಂಬುದು ಸಮಾಜ ಮತ್ತು ಮನುಷ್ಯರ ಲಕ್ಷಣ. ಇದೇ ಅಭಿವೃದ್ಧಿಗೂ ಪ್ರೇರಣೆ. ಹಳೆಯದನ್ನು ಬಳಸಿ ಹೊಸ ಬದಲಾವಣೆ ತರುವುದು ಒಳ್ಳೆಯ ನಡೆ ಎಂದು ಕುವೆಂಪು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಅಧ್ಯಯನ ಸಂಘದ ಅಧ್ಯಕ್ಷ, ಪ್ರಾಧ್ಯಾಪಕ ಪ್ರೊ. ಎಂ.ನಾಗರಾಜ್ ತಿಳಿಸಿದರು.
ಇಲ್ಲಿನ ಕದಂಬ ಮಹಾವಿದ್ಯಾಲಯ, ಸಮಾಜಶಾಸ್ತ್ರ ವಿಭಾಗ, ಕುವೆಂಪು ವಿವಿ ಅಧ್ಯಾಪಕರ ಸಂಘದ ಆಶ್ರಯದಲ್ಲಿ ನಡೆದ ಒಂದು ದಿನದ ಸಮಾಜಶಾಸ್ತ್ರದ ಪಠ್ಯಕ್ರಮ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪೂರಕವಾಗಿ ಯಾವ ರೀತಿ ಪಠ್ಯಪುಸ್ತಕ ಇರಬೇಕು ಎಂಬುದು ಮುಖ್ಯ. ಏಕೆಂದರೆ, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕ ಪಠ್ಯಪುಸ್ತಕ ಅವಲಂಬಿಸಿರುತ್ತದೆ. ನಂತರ ಬರುವ ಫಲಿತಾಂಶ ಉದ್ಯೋಗ ನಿರ್ಮಾಣ ಶಕ್ತಿ ಹೊಂದಿರುತ್ತದೆ. ಇಂತಹ ಪಠ್ಯಕ್ರಮ ಪರಿಚಯಿಸುವ ಮತ್ತು ಬದಲಾಯಿಸುವ ಕಾರ್ಯದ ಹಿಂದೆ ಶ್ರಮವಿರುತ್ತದೆ. ಇಂದು ವಿಶ್ವದ ಬೆಳವಣಿಗೆ ಸಮಾಜಶಾಸ್ತ್ರ ಬೆಳವಣಿಗೆಯಿಂದ ಆಗುತ್ತಿದೆ ಎಂದರು.
ಸಮಾಜಶಾಸ್ತ್ರ ಮತ್ತು ಇತರ ಬೆಳವಣಿಗೆಗಳು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಅತಿ ವೇಗವಾಗಿ ನಡೆಯುತ್ತವೆ. ಸಮಾಜಕ್ಕೆ ಮತ್ತು ಸಮಾಜ ಶಾಸ್ತ್ರಕ್ಕೂ ನೇರ ಸಂಬಂಧವಿರುವುದರಿಂದ ಅದರ ಬದಲಾವಣೆ ಮತ್ತು ಪರಿಷ್ಕರಣೆ ಮೇಲಿಂದ ಮೇಲೆ ಆಗಬೇಕು ಎಂದರು.
ಕುವೆಂಪು ವಿವಿ ಸಮಾಜಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಎಂ.ಸಿ. ಲೋಕೇಶ್ವರಪ್ಪ ಮಾತನಾಡಿ, ಈ ಹಿಂದೆ ಅಧ್ಯಯನ ಮಂಡಳಿಯ 3-4 ಜನರ ಮಂಡಳಿ ಪಠ್ಯಪುಸ್ತಕ ರಚಿಸುತ್ತಿತ್ತು. ಆದರೆ ಇಂದು ಪರೀಕ್ಷೆ, ಜ್ಞಾನ, ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಅಧ್ಯಾಪಕರ ಸಂಘದಿಂದ ಸಮಾಜಶಾಸ್ತ್ರದ ಪಠ್ಯಕ್ರಮ ಕುರಿತು ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.
ಕದಂಬ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಯುವರಾಜ್ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಪೂರ್ವಾಚಾರ್, ಉಪನ್ಯಾಸಕಿ ಕೃಪಾಲಿನಿ, ಹಲವು ಕಾಲೇಜುಗಳ ಉಪನ್ಯಾಸಕರು ಭಾಗವಹಿಸಿದ್ದರು.
ಉಪನ್ಯಾಸಕರಾದ ಎಚ್.ರಾಜಶೇಖರಗೌಡ ಸ್ವಾಗತಿಸಿ, ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.