ನಿವೇಶನ ರದ್ದುಪಡಿಸಿ ನ್ಯಾಯಾಂಗ ತನಿಖೆಗೆ ಆಗ್ರಹ
ಚಿಕ್ಕಮಗಳೂರು: ತಾಲೂಕಿನ ಕರ್ತಿಕೆರೆ ಸಮೀಪದಲ್ಲಿ ಕೆಎಸ್ಆರ್ಟಿಸಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕ್ಷೇಮಾಭಿವೃದ್ಧಿ ಸಂಘಕ್ಕೆ ನೀಡಿರುವ ನಿವೇಶನವನ್ನು ರದ್ದುಪಡಿಸಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಪಿ. ರಾಜರತ್ನಂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಕೆಎಸ್ಆರ್ಟಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನೌಕರರಿಗಾಗಿ ಕರ್ತಿಕೆರೆ ಸಮೀಪದಲ್ಲಿ ಲೇಔಟ್ ನಿರ್ಮಾಣ ಮಾಡಲಾಗಿದೆ. ಆದರೆ, ಈ ಲೇಔಟ್ನಲ್ಲಿ ದಲಿತರಿಗೆ ನಿವೇಶನ ನೀಡದೆ, ಬೇರೆ ಇಲಾಖೆಯ ನೌಕರರಿಗೆ ನೀಡಲಾಗುತ್ತಿದೆ. ಈ ಸಂಬಂಧ ಮುಂಗಡ ಹಣವನ್ನು ಸಹ ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಸಂಘದ ಮಾಜಿ ಅಧ್ಯಕ್ಷರು ಹಾಗೂ ಚಿಕ್ಕಮಗಳೂರಿನಿಂದ ಗುಲ್ಬರ್ಗಕ್ಕೆ ವರ್ಗಾವಣೆಗೊಂಡಿರುವ ಕೆಎಸ್ಆರ್ಟಿಸಿ ನಿಯಂತ್ರಣ ಅಧಿಕಾರಿಗಳು, ಕೆಲವು ನೌಕರರು ಸಂಘದ ಕಾರ್ಯಕಾರಿ ಸಮಿತಿಯ ಅನುಮತಿ ಪಡೆಯದೆ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಂಡು, ಪತ್ನಿಯರ ಹೆಸರಿನಲ್ಲಿ ನಿವೇಶನ ಪಡೆಯಲು ಮುಂದಾಗಿದ್ದಾರೆ. ಈ ನಿವೇಶನ ಕೆಎಸ್ಆರ್ಟಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರಿಗೆ ಮಾತ್ರ ಮೀಸಲಿಡಬೇಕು. ಬೇರೆಯವರಿಗೆ ನಿವೇಶನ ನೀಡುತ್ತಿರುವ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.