ಮಸೀದಿಗಳ ಅಭಿವೃದ್ಧಿಗೆ 25 ಲಕ್ಷ ಮಂಜೂರು: ಶಾಸಕ ವೈ.ಎಸ್.ವಿ. ದತ್ತ
ಕಡೂರು: ಕಡೂರು -ಬೀರೂರು ಪಟ್ಟಣ ಸೇರಿದಂತೆ ಕಡೂರು ವಿಧಾನಸಭಾ ಕ್ಷೇತ್ರದ ವಿವಿಧ ಮಸೀದಿಗಳ ಅಭಿವೃದ್ಧಿಗಾಗಿ 25 ಲಕ್ಷ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ವೈಎಸ್‌ವಿ ದತ್ತ ಹೇಳಿದರು.
ಪಟ್ಟಣದ ಎಮ್ಮೆದೊಡ್ಡಿ ರಸ್ತೆಯಲ್ಲಿ ಇರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ ಅವರು ಮಾತನಾಡಿದರು. ಈ ಬಾರಿ ಈದ್ಗಾ ಮೈದಾನದ ಕಾಂಪೌಂಡ್ ನಿರ್ಮಾಣಕ್ಕಾಗಿ 5 ಲಕ್ಷ ನೀಡಲಾಗಿದೆ. ಪಟ್ಟಣದ ವಿವಿಧ ಮಸೀದಿಗಳ ಅಭಿವೃದ್ಧಿಗೆ 10 ಲಕ್ಷ ಬಿಡುಗಡೆ ಮಾಡಿಸಲಾಗಿದೆ ಎಂದರು. ಬೀರೂರು ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಮಸೀದಿಗಳ ಸಮುದಾಯ ಭವನ, ಕಾಂಪೌಂಡ್ ನಿರ್ಮಾಣ, ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕಾಗಿ ಸುಮಾರು 15 ಲಕ್ಷಗಳಿಗೂ ಹೆಚ್ಚು ಅನುದಾನ ಮಂಜೂರು ಮಾಡಿಸಲಾಗಿದೆ ಎಂದರು. ಈದ್ಗಾ ಮೈದಾನಕ್ಕೆ ನೆಲಹಾಸು ಸೌಲಭ್ಯ ಕಲ್ಪಿಸಲು ಭರವಸೆಯಂತೆ ಅನುದಾನ ನೀಡಲಾಗಿದೆ. ಆದರೆ ಈ ಅನುದಾನದಿಂದ ಕಾಂಪೌಂಡ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈದಾನಕ್ಕೆ ನೆಲಹಾಸು ಹಾಕಿಸಿಕೊಡುವುದಾಗಿ ಭರವಸೆ ನೀಡಿದರು. ಮುಸ್ಲಿಂ ಧರ್ಮಗುರುಗಳು ಮಾತನಾಡಿ, ನಂಬಿದ ದೇವರು ಕೈ ಬಿಡುವುದಿಲ್ಲ. ಅಲ್ಲಾ ಹೇಳಿರುವಂತೆ ಕೆಲಸದಲ್ಲಿ ದೇವರನ್ನು ಕಾಣಬೇಕು. ನೀರು, ಗಾಳಿ, ಪ್ರಕೃತಿಯಲ್ಲಿ ದೇವರಿದ್ದಾರೆ. ಸಂಕಷ್ಟದಲ್ಲಿರುವ ಪ್ರತಿಯೊಬ್ಬನನ್ನು ಕಾಪಾಡಲು ಅಲ್ಲಾ ಇರುತ್ತಾರೆ. ಬೇರೆಯವರಿಗೆ ಕೆಡುಕು ಮಾಡಬಾರದು. ಪ್ರೀತಿಯಿಂದ ಮಾತನಾಡಬೇಕು ಬೇರೆಯವರ ಬಗ್ಗೆ ಒಳ್ಳೆಯದನ್ನು ಬಯಸಬೇಕು ಎಂದರು. ಶಾಸಕ ದತ್ತ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾಡ ಎನ್.ಇಮಾಂ, ಮಹಮದ್ ಇಸ್ಮಾಯಿಲ್, ಭಂಡಾರಿ ಶ್ರೀನಿವಾಸ್, ಕೆ.ಎಂ. ಮಹೇಶ್ವರಪ್ಪ, ಹಬೀಬುಲ್ಲಾ ಖಾನ್, ಎನ್.ಬಷೀರ್‌ಸಾಬ್, ಮಂಡಿ ಇಕ್ಬಾಲ್, ಯಾಸೀನ್ ಮತ್ತಿತರು ಉಪಸ್ಥಿತರಿದ್ದರು.