ಡಿಸಿಸಿ ಬ್ಯಾಂಕ್: ಮೂವರ ಸೆರೆ
ಶಿವಮೊಗ್ಗ: ಡಿಸಿಸಿ ಬ್ಯಾಂಕ್ ನಗರ ಶಾಖೆಯ ಅಡಮಾನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಬುಧವಾರ ಮತ್ತೆ ರೌಡಿ ಶೀಟರ್ ಮಾರ್ಕೆಟ್ ಗಿರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಗೀತಾ ಹಾಗೂ ರುದ್ರೇಶ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇದೊಂದಿಗೆ ಬಂಧಿತರ ಸಂಖ್ಯೆ 15ಕ್ಕೆ ಏರಿದೆ. ಈಗಾಗಲೇ ಬಂಧಿತ ಪ್ರಮುಖ ಆರೋಪಿ ಶಾಖಾ ವ್ಯವಸ್ಥಾಪಕರಾದ ಶೋಭಾ ಅವರೊಂದಿಗೆ ರೌಡಿ ಶೀಟರ್ ಮಾರ್ಕೆಟ್ ಗಿರಿ ಸ್ನೇಹ ಸಂಪಾದಿಸಿ, ಬ್ಯಾಂಕ್ಗೆ ನಕಲಿ ದಾಖಲೆ ನೀಡಿ ಹಣ ಪಡೆದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೂಡಿದ್ದಾರೆಂಬ ಆರೋಪದ ಮೇರೆಗೆ ಈತನನ್ನು ಬಂಧಿಸಲಾಗಿದೆ.
ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ಬೆಳ್ಳಿ ಮೌಲ್ಯ 10 ಲಕ್ಷ, ಸ್ಥಿರಾಸ್ತಿ ದಾಖಲೆ ಮೌಲ್ಯ ಅಂದಾಜು 10 ಕೋಟಿ ಎಂದು ಡಿಸಿಐಬಿ ಇನ್ಸ್ಪೆಕ್ಟರ್ ಜೈರಾಜ್ ಹೇಳಿದ್ದಾರೆ.