ಮಂದಗತಿಯಲ್ಲಿ ಕರಗಡ ಕಾಮಗಾರಿ ಜೈಲ್ ಭರೋಗೆ ಸಮಿತಿ ತೀರ್ಮಾನ
ಚಿಕ್ಕಮಗಳೂರು: ಕರಗಡ ಕಾಮಗಾರಿ ತೀವ್ರಗತಿಯಲ್ಲಿ ಮುಗಿಸುವಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಮುಂದಿನ ಹಂತದಲ್ಲಿ ಜೈಲ್ ಭರೋ, ಕಚೇರಿ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಕರಗಡ ಕುಡಿಯುವ ನೀರಿನ ಯೋಜನೆ ಹೋರಾಟ ಸಮಿತಿ ಸಂಚಾಲಕ ಗುರುಶಾಂತಪ್ಪ ಹೇಳಿದ್ದಾರೆ.
ಈಗಾಗಲೇ ಎರಡು ಹಂತದಲ್ಲಿ ಹೋರಾಟ ನಡೆಸಲಾಗಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹೋರಾಟಕ್ಕೆ ಸ್ಪಂದಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ಸಣ್ಣ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಯೋಜನೆ ವ್ಯಾಪ್ತಿಗೆ ಒಳಪಡುವ 11 ಗ್ರಾಮ ಪಂಚಾಯ್ತಿಯ ರೈತ ಸಮೂಹ ಪ್ರತಿದಿನ ಒಂದು ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಗೂ ಜೈಲ್ ಭರೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಹಿಂದೆ ಹೋರಾಟದ ಸಂದರ್ಭದಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿ ರೈತರೊಂದಿಗೆ ಮಾತುಕತೆ ನಡೆಸಿ, 30 ದಿನಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅದು, ಹುಸಿಯಾಗಿದೆ. ಬಯಲು ಪ್ರದೇಶದಲ್ಲಿ ಈ ಬಾರಿಯೂ ಸಕಾಲಕ್ಕೆ ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ ಎಂದರು.
ಈಗಾಗಲೇ ಕರಗಡದ ದೇವಿಕೆರೆಗೆ ಮುಗುಳುವಳ್ಳಿ ಪಿಕಪ್ ಕಾಲುವೆಯಿಂದ ನೀರು ಹರಿಯುತ್ತಿದ್ದು, ಇನ್ನೊಂದು ವಾರದೊಳಗೆ ಆ ಕೆರೆ ತುಂಬುವ ಸಾಧ್ಯತೆ ಇದೆ. ಆ ನೀರು ಹನಿಕೆಯವರೆಗೆ ಕಾಲುವೆಯಲ್ಲಿ ಹರಿದು ಹೋಗಲಿದೆ. ಆದರೆ, ಅಲ್ಲಿರುವ ಸುಮಾರು 400 ಮೀಟರ್ ಉದ್ದ ಬಂಡೆ ಸಿಡಿಸಿ ತೆಗೆಯುವ ಕಾರ್ಯ ಬಾಕಿ ಉಳಿದಿದ್ದರಿಂದ ಈ ನೀರು ಹರಿದು ಹೋಗಲು ಆಗುವುದಿಲ್ಲ. ಇದರಿಂದ ರೈತರು ನೀರಿನಿಂದ ವಂಚಿತರಾಗಲಿದ್ದಾರೆ. ಕೂಡಲೇ ಬಂಡೆ ಒಡೆಯುವ ಕೆಲಸ ಪೂರ್ಣಗೊಳಿಸಬೇಕು ಎಂದರು.
ಪರ್ಯಾಯ ಕ್ರಮದ ಬಗ್ಗೆಯೂ ಗಮನ ಹರಿಸಿ ಕ್ಷಮ ಪೀಡಿತ ಪ್ರದೇಶದ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ರವೀಶ್ ಕ್ಯಾತನಬೀಡು, ಬಿ. ಅಮ್ಜದ್, ಎಚ್.ಎಂ. ರೇಣುಕಾರಾಧ್ಯ, ಎಚ್.ಕೆ. ಶಶಿಧರ್ ಹಾಗೂ ಬಿ.ವಿ. ಗಂಗಾಧರ ಉಪಸ್ಥಿತರಿದ್ದರು.