ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೇಂದ್ರೀಯ ವಿದ್ಯಾಲಯ: ಇಕ್ಕಟ್ಟಿಗೆ ಸಿಲುಕಿದ ಸರ್ಕಾರ

Lingaraj Badiger
Updated On : 2 Jun 2014, 11:54 am

ಚಿಕ್ಕಮಗಳೂರು: ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯ ಪುನಾರಂಭಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಸಕಾಲದಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮಾಡದೆ ಇರುವುದರಿಂದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರೀಯ ವಿದ್ಯಾಲಯದ ಛೇರ್ಮನ್, ಕೇಂದ್ರೀಯ ವಿದ್ಯಾಲಯದ ಡಿಸಿ, ಜಂಟಿ ನಿರ್ದೇಶಕರು ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಮೇ 22 ರಂದು ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿ ಮಾಡಿದೆ.
ಕುದುರೆಮುಖದಲ್ಲಿ ಕೇಂದ್ರೀಯ ವಿದ್ಯಾಲಯ ತೆರೆಯಲು ಕುದುರೆಮುಖ ಅದಿರು ಕಂಪನಿ ಕೇಂದ್ರೀಯ ವಿದ್ಯಾಲಯ ಸಂಘಟನ್ ಗೆ ಅನುದಾನ ನೀಡುತ್ತಿತ್ತು. ಕಂಪನಿ ನಷ್ಟದಲ್ಲಿರುವುದರಿಂದ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಕುದುರೆಮುಖ ಕಂಪನಿಯ ಪತ್ರ ಕೈ  ಸೇರುತ್ತಿದ್ದಂತೆ ಕೇಂದ್ರೀಯ ವಿದ್ಯಾಲಯ ಸಂಘಟನ್ ಶಾಲೆ ಮುಚ್ಚುವ ನಿರ್ಧಾರ ಕೈಗೊಂಡಿತು. ಇದನ್ನು ಪ್ರಶ್ನಿಸಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಹೈಕೋರ್ಟ್ ಈ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಶಾಲೆ ಮುಚ್ಚಬಾರದು, ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಇದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಮಧ್ಯಾಂತರ ಆದೇಶ ನೀಡಿತ್ತು.
ನ್ಯಾಯಾಂಗ ನಿಂದನೆಯ ನೋಟಿಸ್: ರಾಜ್ಯ ಸರ್ಕಾರ ಈ ಶಾಲೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಆದರೆ, ನಿಗದಿತ ಕಾಲಾವಧಿಯೊಳಗೆ ಶಾಲೆಯನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸಾಧ್ಯವಾಗದೆ ಹೋಗಿದ್ದರಿಂದ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿ ಮಾಡಲಾಗಿದೆ. ಈ ನೋಟಿಸ್‌ಗೆ ಜೂ. 9ರಂದು ಉತ್ತರ ನೀಡಬೇಕಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಜಿಲ್ಲಾಡಳಿತ ಈವರೆಗೆ ತೆಗೆದುಕೊಂಡಿರುವ ಕ್ರಮದ ಕುರಿತು ವರದಿ ಸಿದ್ಧಪಡಿಸಿದೆ.
ತಾತ್ಕಾಲಿಕ: ಈ ಶಾಲೆಯನ್ನು ರಾಜ್ಯ ಸರ್ಕಾರ ವಶಕ್ಕೆ ತೆಗೆದುಕೊಂಡಿದೆ. ಆದರೆ, ಈ ಶಾಲೆಯನ್ನು ಮುಂದುವರಿಸಲು ರಾಜ್ಯ ಸರ್ಕಾರದ ಶಿಕ್ಷಣ ಕಾಯ್ದೆಯಲ್ಲಿ ಅವಕಾಶ ಇಲ್ಲ. ಕಾರಣ, ಇಲ್ಲಿ ಕೇಂದ್ರೀಯ ಪಠ್ಯ ಕ್ರಮದಡಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ನ್ಯಾಯಾಲಯ ಈ ಶಾಲೆಯನ್ನು ಮುಂದುವರಿಸುವಂತೆ ನೀಡಿರುವ ಆದೇಶ ತಾತ್ಕಾಲಿಕವಾದುದು.
ಸರ್ಕಾರ ಮನವಿ: ಈ ಶಾಲೆ ಮುಚ್ಚಲು ತೀರ್ಮಾನ ಕೈಗೊಂಡ ತಕ್ಷಣ ಕೇಂದ್ರೀಯ ವಿದ್ಯಾಲಯ ಸಂಘಟನ್ ಇಲ್ಲಿರುವ ಶಿಕ್ಷಕರನ್ನು ತನ್ನ ಅಧೀನದಲ್ಲಿರುವ ತುಮಕೂರು ಹಾಗೂ ದಕ್ಷಿಣ ಕನ್ನಡದ ಶಾಲೆಗಳಿಗೆ ವರ್ಗಾವಣೆ ಮಾಡಿದ್ದು, ಹೈಕೋರ್ಟ್ ಈ ಶಾಲೆ ಮುಂದುವರಿಸಿಕೊಂಡು ಹೋಗುವಂತೆ ಆದೇಶ ನೀಡಿದ ನಂತರ ರಾಜ್ಯ ಸರ್ಕಾರ ಈ ಶಾಲೆ ಮುಂದುವರಿಸುವಂತೆ ಕೇಂದ್ರೀಯ ವಿದ್ಯಾಲಯ ಸಂಘಟನ್‌ಗೆ ಮನವಿ ಮಾಡಿತ್ತು. ಆದರೆ, ಇದಕ್ಕೆ ಕೆವಿಎಸ್ ಈವರೆಗೆ ಸ್ಪಂದಿಸಿಲ್ಲ. ಇಲ್ಲಿಂದ ಬೇರೆಡೆಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಕರೆಸಿಕೊಳ್ಳುವ ಕೆಲಸ ಮಾಡಿಲ್ಲ.
ಈಗಾಗಲೇ ಈ ಶಾಲೆ ಮುಚ್ಚಲಾಗಿದೆ ಎಂದು ಕೆವಿಎಸ್ ತನ್ನ ಕೇಂದ್ರೀಯ ಕಚೇರಿಗೆ ಪತ್ರ ಮುಖೇನ ತಿಳಿಸಿದ್ದರಿಂದ ಮತ್ತೆ ಈ ಶಾಲೆ ಪುನಾರಂಭ ಮಾಡಲು ಹೊಸದಾಗಿ ಅನುಮತಿ ನೀಡಬೇಕು.
ತೂಗುಗತ್ತಿ: ಈ ಶಾಲೆಯನ್ನು ವಶಕ್ಕೆ ತೆಗೆದುಕೊಂಡು ಪುನಾರಂಭ ಮಾಡಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. ಆದರೆ, ಈ ಶಾಲೆ ಕೆವಿಎಸ್ ವ್ಯಾಪ್ತಿಗೆ ಒಳಪಡುವುದರಿಂದ ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತೆ ವಿನಃ ಅದನ್ನು ಮುಂದುವರಿಸಲು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶ ಇಲ್ಲ.
ಶಾಲೆಯನ್ನು ವಶಕ್ಕೆ ತೆಗೆದುಕೊಂಡಿದೆ. ಆದರೆ, ಅದನ್ನು ಮುಂದುವರಿಸಲು ಕೆವಿಎಸ್ ಮುಂದೆ ಬರುತ್ತಿಲ್ಲ. ಆದುದರಿಂದ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಕೆವಿಎಸ್ ನ್ಯಾಯಾಲಯದ ತೂಗುಗತ್ತಿಯಿಂದ ತಪ್ಪಿಸಿಕೊಂಡಿದೆ.
ಸದ್ಯ ಈ ಶಾಲೆಗೆ ರಜೆ ಇದ್ದು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಕುದುರೆಮುಖದ ಕೇಂದ್ರೀಯ ವಿದ್ಯಾಲಯ ದಾಖಲು ಮಾಡಿಕೊಳ್ಳುತ್ತಿಲ್ಲ. ನ್ಯಾಯಾಲಯ ಆದೇಶದ ನಂತರ ಶಾಲೆ ಪುನಾರಂಭಗೊಂಡಿತ್ತು.
ಇಲ್ಲಿ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಮೂರು ಮಂದಿ ಶಿಕ್ಷಕರು ಇದ್ದರು. ಆದರೆ, ಇದೀಗ ಯಾವುದೇ ಸಿಬ್ಬಂದಿ ಈ ಶಾಲೆಯಲ್ಲಿಲ್ಲ. ನ್ಯಾಯಾಲಯದ ಆದೇಶ ಇಲ್ಲಿನ ಮಕ್ಕಳಲ್ಲಿ ಆಶಾಭಾವ ಮೂಡಿಸಿತ್ತು. ಆದರೆ, ಇದಕ್ಕೆ ಕೆವಿಎಸ್ ಸ್ಪಂದಿಸದೆ ಇರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
- ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement