ನಿವೃತ್ತ ನೌಕರರಿಗೆ ವಿಪ್ರ ಸಂಘದಿಂದ ಸನ್ಮಾನ
ಕೊಪ್ಪ: ತಾಲೂಕು ವಿಪ್ರ ನೌಕರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ 77 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 5 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಪ್ರದಾನ ಹಾಗೂ 10 ಮಂದಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ರಾಮಪ್ರಸಾದ್ ಮಾತನಾಡಿ, ವಿಪ್ರರು ನೈತಿಕ ಶಿಕ್ಷಣ ಹೊಂದಿ ಕರ್ತವ್ಯ ಪರತೆ, ಸೃಜನಾತ್ಮಕ ಚಟುವಟಿಕೆಯಿಂದ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಸುಬ್ರಮಣ್ಯ ಮಾತನಾಡಿ, ಪದವಿಪೂರ್ವ ಪರೀಕ್ಷೆ ಹಾಗೂ ಸಿಇಟಿ ಪರೀಕ್ಷೆ ಬರೆಯುವವರಿಗೆ ಸಂಘ ಉಚಿತ ತರಬೇತಿ ನೀಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಪುರಸ್ಕಾರ, ಶೈಕ್ಷಣಿಕ ಸಾಧನೆಗ ಸಹಕಾರಿ ಆಗುವಂತೆ ವಿದ್ಯಾನಿಧಿ ಪ್ರಧಾನ ಮಾಡುತ್ತಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಾಸ್ರಿ ವರದಿ ವಾಚಿಸಿ, ಸಂಘದ ವತಿಯಿಂದ ರಕ್ತದಾನ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ ಹಾಗೂ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಿ ಸಮಾಜಕ್ಕೆ ಸೇವೆ ಸಲ್ಲಿಸಿದೆ. ಸಂಘದ ಸದಸ್ಯ ಹರೀಶ್‌ಶರ್ಮ 29 ಬಾರಿ ರಕ್ತದಾನ ಮಾಡಿ ತಮ್ಮಲ್ಲಿನ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದರು.
ಉದಯಕುಮಾರ್, ರಮೇಶ್, ಶಿವಶಂಕರ್, ರಮೇಶ್ ಇದ್ದರು.