ಇನಾಂ ಭೂಮಿ; ಸಂತ್ರಸ್ತರೊಂದಿಗೆ ನಾಳೆ ಧರಣಿ
ಕನ್ನಡಪ್ರಭ ವಾರ್ತೆ, ಮೂಡಿಗೆರೆ, ಜೂ.2
ತಾಲೂಕಿನ ಕಳಸ ಇನಾಂ ಭೂಮಿ ಸಮಸ್ಯೆಯನ್ನು ನ್ಯಾಯೋಚಿತ ರೀತಿಯಲ್ಲಿ ಪರಿಹರಿಸಿ ಸಂತ್ರಸ್ಥರಿಗೆ ನ್ಯಾಯ ಕಲ್ಪಿಸಲು ಸರ್ಕಾರದ ಗಮನ ಸೆಳೆಯುವ ದೃಷ್ಟಿಯಿಂದ ಸಂತ್ರಸ್ಥರೊಂದಿಗೆ ಜೂ. 4ರಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಠಾವಧಿ ಧರಣಿ ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಮಾಡಿದ ಕಿತಾಪತಿ ಇಂದು 3 ಸಾವಿರಕ್ಕೂ ಅಧಿಕ ಜನರನ್ನು ಬೀದಿ ಪಾಲಾಗುವಂತೆ ಮಾಡಿದೆ. ಕೃಷಿಯನ್ನೆ ಅವಲಂಬಿಸಿಕೊಂಡಿರುವ ಜನರು ಬೀದಿ ಪಾಲಾಗುತ್ತಿದ್ದರೂ ಸರ್ಕಾರ ಕೈ ಚೆಲ್ಲಿ ಕುಳಿತಿದೆ. ಬ್ರಿಟಿಷರ ಕಾಲದಿಂದಲೂ ಉಳುಮೆ ಮತ್ತು ಹಿಡುವಳಿ ಭೂಮಿಯಲ್ಲಿ ಬದುಕುತ್ತಿರುವ ರೈತಾಪಿಗಳು ಮತ್ತು ಬಡ ಜನರನ್ನು ಎತ್ತಂಗಡಿ ಕೃತ್ಯವನ್ನು ಸಹಿಸುವುದಿಲ್ಲ.
ಸರ್ಕಾರ ಇಲ್ಲಿನ ವಾಸಿಗಳಿಗೆ ಅನೇಕ ಹಕ್ಕುಗಳ ಜತೆಗೆ ಮೂಲ ಸೌಕರ್ಯಗಳನ್ನು ಇದೇ ಸ್ಥಳದಲ್ಲಿ ಒದಗಿಸಿದೆ. ಆದರೆ, ಇದೀಗ ಅರಣ್ಯ ಭೂಮಿ ನೆಲೆಯಲ್ಲಿ ಜನರನ್ನು ಸಂತ್ರಸ್ಥರನ್ನಾಗಿ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ.
ಅರಣ್ಯ ಇಲಾಖೆಗೆ ನೀಡಲಿ: ಸರ್ಕಾರಕ್ಕೆ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಯಾವುದು ಎನ್ನುವ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಜಂಟಿ ಸರ್ವೆ ಕಾರ್ಯ ನಡೆದಿಲ್ಲ. ನ್ಯಾಯಾಲಯದ ಮುಂದೆ ಸರಿಯಾದ ದಾಖಲೆಗಳನ್ನು ಒದಗಿಸಿದ್ದಿದ್ದರೆ ನೂರಾರು ಕುಟುಂಬಗಳು ಬೀದಿ ಪಾಲಾಗುವ ಹಂತದ ವಾತಾವರಣ ಸೃಷ್ಟಿ ಆಗುತ್ತಿರಲಿಲ್ಲ. ಅರಣ್ಯ ಹಕ್ಕು ಕಾಯ್ದೆ ಮೂಲಕ ಜನರಿಗೆ ಬದುಕುವ ಅವಕಾಶ ಕಲ್ಪಿಸಬೇಕು. ರಾಜ್ಯ ಸರ್ಕಾರ ಇನಾಂ ಭೂಮಿ ಬದಲು ಬೇರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಮನವಿ: ಜೂ.6ರಂದು ಹೈಕೋರ್ಟ್ನಲ್ಲಿ ಇನಾಂ ಭೂಮಿ ಕುರಿತು ವಿಚಾರಣೆ ನಡೆಯಲಿದೆ. ಈ ವೇಳೆ ಸರ್ಕಾರ ಮಧ್ಯ ಪ್ರವೇಶ ಮಾಡಲೇಬೇಕು ಎಂದರು.
ಭೂ ಕಬಳಿಕೆ ಕಾಯ್ದೆ ಜಾರಿಗೆ ಉತ್ಸುಕತೆ ತೋರುತ್ತಿರುವ ಸರ್ಕಾರ ಮಲೆನಾಡು ಭಾಗವನ್ನು ಅದರ ವ್ಯಾಪ್ತಿಯಿಂದ ಕೈಬಿಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಇನಾಂ ಸಂತ್ರಸ್ತರ ಧರಣಿಯಲ್ಲಿ ಪಾಲ್ಗೊಂಡು ತಮ್ಮ ನಿಲುವುಗಳನ್ನು ಪ್ರಕಟಿಸಲಿ. ಜನರ ಪರವಾಗಿರುವ ಸಂಘಟನೆಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ದಯಾಕರ್, ಕೃಷಿಕ ಸಮಾಜದ ಪಿ.ಕೆ.ನಾಗೇಶ್, ಜೆಡಿಎಸ್ ಮುಖಂಡ ಸುರೇಂದ್ರ ಉಪಸ್ಥಿತರಿದ್ದರು.