ಎಲ್ಲರಿಗೂ ನೀರಿಳಿಸಿದ ಸದಸ್ಯರು
ಚಿಕ್ಕಮಗಳೂರು: ನನ್ನ ಕ್ಷೇತ್ರದ ಆರೇಳು ಗ್ರಾಮಗಳಲ್ಲಿ ನೀರಿಲ್ಲ, ಅಧಿಕಾರಿಗಳೇ ಬನ್ನಿ ನಮ್ಮೂರಿಗೆ ನಾನು ಹೇಳುತ್ತಿರುವುದು ಸುಳ್ಳಾಗಿದ್ದರೆ ಕ್ಷಮೆ ಕೋರುತ್ತೇನೆ.
- ಇದು ಜಿಲ್ಲಾ ಪಂಚಾಯಿತಿ ಸದಸ್ಯ ಕಲ್ಮರಡಪ್ಪ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಬರ ಪರಿಹಾರ ಕುರಿತು ಜಿಪಂ ಅಧ್ಯಕ್ಷೆ ಪದ್ಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಆಡಿರುವ ಮಾತಿದು.
ಜಿಲ್ಲೆಯ ಕಡೂರು ತಾಲೂಕಿಗೆ ಬರ ಪರಿಹಾರದಡಿಯಲ್ಲಿ ಹಾಗೂ ಇತರೆ ತಾಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ವಿಶೇಷ ಅನುದಾನ ನೀಡಿದರೂ ನೀರಿನ ಹಾಹಾಕಾರದ ತೀವ್ರತೆ ಕಡಿಮೆಯಾಗಿಲ್ಲ. ಸರ್ಕಾರ ಕೊಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ, ನಿಗದಿತ ಕಾಲದೊಳಗೆ ಕಾಮಗಾರಿಗಳು ಪೂರ್ಣಗೊಂಡಿಲ್ಲ, ಈ ಎಲ್ಲಾ ಕಾರಣಗಳಿಗಾಗಿ ಶಾಸಕ ಸಿ.ಟಿ. ರವಿ ಸೇರಿದಂತೆ ಜಿಲ್ಲಾ ಪಂಚಾಯಿತಿಯ ಆಡಳಿತ ಪಕ್ಷವಾದ ಬಿಜೆಪಿ ಹಾಗೂ ಪ್ರತಿಪಕ್ಷದ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬರಪೀಡಿತ ತಾಲೂಕು: ಸಭೆಯ ಆರಂಭದಲ್ಲಿ ಜಿಪಂ ಸದಸ್ಯ ಕಲ್ಮರಡಪ್ಪ ಮಾತನಾಡಿ, ಕಡೂರು ತಾಲೂಕು ಬರಪೀಡಿತ ತಾಲೂಕೆಂದು ಸರ್ಕಾರ ಘೋಷಣೆ ಮಾಡಿದೆ. ಸರ್ಕಾರ ಅನುದಾನ ನೀಡಿದೆ. ಆದರೆ, ಇಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಬೋರ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಸವಿತಾ ರಮೇಶ್, ಜಿಲ್ಲಾ ಪಂಚಾಯಿತಿಯಲ್ಲಿ ಕುಡಿಯುವ ನೀರಿಗಾಗಿ ಹಣ ಇದೆ, ಜನಪ್ರತಿನಿಧಿಗಳಿದ್ದಾರೆ, ಅಧಿಕಾರಿಗಳಿದ್ದಾರೆ. ಆದರೆ, ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ, ಮಲೆನಾಡಿನ ಬಹಳಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರು.
ಬೋರ್‌ವೆಲ್: ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆಸಲಾಗುತ್ತಿದೆ. ನೀರು ಬಾರದಿರುವ ಕಡೆಗಳಲ್ಲಿ ಸಮೀಪದ ಖಾಸಗಿ ಬೋರ್‌ವೆಲ್‌ಗಳಿಂದ ಕುಡಿಯುವ ನೀರನ್ನು ತೆಗೆದುಕೊಂಡು ಸಾರ್ವಜನಿಕರಿಗೆ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಉತ್ತರ ನೀಡಿದರು. ನೀರಿನ ಅಭಾವ ಇರುವ ಹಳ್ಳಿಗಳ ಪಟ್ಟಿ ಸಿದ್ಧಪಡಿಸಿ ಕೊಟ್ಟರೆ ಕ್ರಮ ವಹಿಸಲಾಗುವುದೆಂದು ಕಾರ್ಯಪಾಲಕರ ಅಭಿಯಂತರರು ಹೇಳಿದರು.
ಶಾಶ್ವತ ಯೋಜನೆ: ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ಸಮಸ್ಯೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಪರಿಹಾರ ಹಾಗೂ ಇನ್ನೊಂದೆಡೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಶ್ವತವಾದ ಯೋಜನೆ ರೂಪಿಸಬೇಕೆಂದು ಶಾಸಕ ಸಿ.ಟಿ. ರವಿ ಸಲಹೆ ನೀಡಿದರು.
ಪ್ರಸ್ತಾವನೆ: ಜಿಲ್ಲೆಯಲ್ಲಿ 7 ಕಡೆಗಳಲ್ಲಿ ಮಲ್ಟಿ ವಿಲೇಜ್ ಸ್ಕೀಂನಡಿಯಲ್ಲಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರರು ಹೇಳಿದರು. ಈಗಾಗಲೇ ಕಳಸ ಪಟ್ಟಣಕ್ಕೆ ಮಲ್ಟಿ ವಿಲೇಜ್ ಸ್ಕೀಂನಲ್ಲಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡು 5 ವರ್ಷ ಕಳೆದಿದೆ. ಆದರೆ, ಈವರೆಗೆ ಕಾಮಗಾರಿ ಮುಕ್ತಾಯಗೊಂಡಿಲ್ಲ. ಇದಕ್ಕೆ ಕಾರಣವೇನೆಂದು ಶಿವೇಗೌಡ ಪ್ರಶ್ನಿಸಿದರು. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಅನುಕೂಲವಾಗುವ ಯೋಜನೆಗಳಾಗಬಾರದು ಎಂದು ಸಿ.ಟಿ. ರವಿ ಹೇಳಿದರು.
ಸರ್ಕಾರಕ್ಕೆ ಪತ್ರ: ಕಳಸಕ್ಕೆ ನೀರು ಕೊಡುವ ಯೋಜನೆಗೆ ಪೈಪ್ ಲೈನ್ ಹಾಕುವ ಕಾಮಗಾರಿ ಬಾಕಿ ಇದ್ದು, ಪೈಪ್‌ಲೈನ್ ಹಾದು ಹೋಗುವ ಪ್ರದೇಶ ಮೀಸಲು ಅರಣ್ಯದ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆಯವರು ತಡೆ ಹಾಕಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳಿಂದ ಜಂಟಿ ಸರ್ವೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ಹೇಳಿದರು. ಯಾರ ಮನೆ ಹಾಳಾದ್ರು ಪರವಾಗಿಲ್ಲ, ನಿಮಗೆ ಕಮಿಷನ್ ಸಿಗಬೇಕೆಂದು ಸಿ.ಟಿ. ರವಿ ಕಿಡಿಕಾರಿದರು.
ಕಡೂರು ತಾಲೂಕಿಗೆ ಬಿಡುಗಡೆಯಾಗಿರುವ 56.20 ಲಕ್ಷ ಬಳಕೆಯಾಗಿಲ್ಲ ಎಂದು ಕಾರ್ಯಪಾಲಕ ಅಭಿಯಂತರರು ತಿಳಿಸಿದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ 3 ಕೋಟಿ ಬಿಡುಗಡೆಯಾಗಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಪೋರ್ಸ್ ಇದ್ದು, ಅವರಿಂದ ಬೇಡಿಕೆಯ ಪಟ್ಟಿ ಈವರೆಗೆ ಬಂದಿಲ್ಲ ಎಂದು ಕಾರ್ಯಪಾಲಕ ಅಭಿಯಂತರರು ತಿಳಿಸಿದರು.