ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.6
ದಿನೇ ದಿನೇ ಹೆಚ್ಚುತ್ತಿರುವ ಕೃಷಿ ಭೂಮಿ ಒತ್ತುವರಿ ತೆರವು ಪ್ರಕ್ರಿಯೆ ಹಿನ್ನೆಲೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಲೆನಾಡು ಭಾಗದ ರೈತರು ಮತ್ತು ಬೆಳೆಗಾರರು ಒಗ್ಗೂಡಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ(ಕೆಜಿಎಫ್) ಅಧ್ಯಕ್ಷ ಬಿ.ಎಸ್. ಜಯರಾಂ ಕರೆ ನೀಡಿದ್ದಾರೆ.
ಕಳಸಾ ಇನಾಂ ಭೂಮಿ ತೆರವು ಪ್ರಕ್ರಿಯೆ ವಿರೋಧಿಸಿ ಆ ಭಾಗದ ಕೃಷಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಕೆಜಿಎಫ್ ಪದಾಧಿಕಾರಿಗಳೊಂದಿಗೆ ಶುಕ್ರವಾರ ಚಳವಳಿಯಲ್ಲಿ ಮಾತನಾಡಿದರು.
ಒತ್ತುವರಿ ತೆರವು ಪ್ರಕ್ರಿಯೆ ಕೈಬಿಡುವಂತೆ ಕೆಜಿಎಫ್ ಈಗಾಗಲೇ ಸಾಕಷ್ಟು ಬಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದೆ. ಹಲವು ಬಾರಿ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದಿನದಿಂದ ದಿನಕ್ಕೆ ಒತ್ತುವರಿ ತೆರವು ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಬಡಕೃಷಿಕರು ಮತ್ತು ಬೆಳೆಗಾರರು ಬೀದಿಪಾಲಾಗುತ್ತಿದ್ದಾರೆ ಎಂದು ಆರೋಪಿಸಿದರು.
ಹೋರಾಟ: ಒತ್ತುವರಿ ತೆರವು ಪ್ರಕ್ರಿಯೆ ಇದೇ ರೀತಿ ಮುಂದುವರಿದಲ್ಲಿ ಮಲೆನಾಡು ಭಾಗದಲ್ಲಿ ಕೃಷಿ ಭೂಮಿಯೇ ಇಲ್ಲದಂತಾಗುತ್ತದೆ. ಬಡ ರೈತರು ಮತ್ತು ಬೆಳೆಗಾರರು ತಮ್ಮ ಮನೆ ಕಳೆದುಕೊಂಡು ಬೀದಿಪಾಲಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಸದ್ಯದಲ್ಲೇ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ರೂಪಿಸಲಿದೆ ಎಂದರು.
ಅಸ್ತಿತ್ವದ ಉಳಿವಿಗಾಗಿ ಬೀದಿಗಿಳಿಯುವುದು ಅನಿವಾರ್ಯ. ಕೆಜಿಎಫ್ ನಡೆಸಲಿರುವ ಹೋರಾಟಕ್ಕೆ ಮಲೆನಾಡು ಭಾಗದ ಎಲ್ಲಾ ಕೃಷಿಕರು ಮತ್ತು ಬೆಳೆಗಾರರು ಒಂದಾಗಿ ಕೈಜೋಡಿಸುವಂತೆ ಮನವಿ ಮಾಡಿದರು.
ಬೇಜವಾಬ್ದಾರಿ ಕಾರಣ: ಕೆಜಿಎಫ್ ಸಂಘಟನಾ ಕಾರ್ಯದರ್ಶಿ ಡಿ.ಎಂ. ವಿಜಯ್ ಮಾತನಾಡಿ, ಒತ್ತುವರಿ ತೆರವು ಸಮಸ್ಯೆ ಉದ್ಬವವಾಗುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ. ಸ್ಥಳಕ್ಕೆ ತೆರಳಿ ವಾಸ್ತವಾಂಶ ಅರಿಯದೆ ಕಚೇರಿಯಲ್ಲೇ ಕುಳಿತು ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಅಧಿಕಾರಿಗಳು ತಪ್ಪು ವರದಿ ಸಲ್ಲಿಸಿ ರುವ ಪರಿಣಾಮ ಕೃಷಿಕರು ಮತ್ತು ಬೆಳೆಗಾರರು ಬೀದಿಪಾಲಾಗುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಆರೋಪಿಸಿದರು.
ಅಧಿಕಾರಿಗಳ ತಪ್ಪಿಗೆ ಬಡವರನ್ನು ಬಲಿಪಶು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಒತ್ತುವರಿ ತೆರವು ಪ್ರಕ್ರಿಯೆ ಹಿನ್ನೆಲೆಯಲ್ಲಿ ತಮ್ಮ ಬದುಕನ್ನು ಉಳಿಸಿಕೊಳ್ಳಲು ಮಲೆನಾಡು ಭಾಗದ ಎಲ್ಲಾ ರೈತರು ಮತ್ತು ಬೆಳೆಗಾರರು ಒಂದಾಗಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಕೆಜಿಎಫ್ ಮಾಜಿ ಅಧ್ಯಕ್ಷ ಡಾ. ಎನ್.ಕೆ. ಪ್ರದೀಪ್, ಉಪಾಧ್ಯಕ್ಷ ರತೀಶ್‌ಕುಮಾರ್, ಆಲ್ದೂರು ಬೆಳೆಗಾರರ ಸಂಘದ ಕಾರ್ಯದರ್ಶಿ ಎಚ್.ಇ. ಲವ, ಹಾಸನ, ಸಕಲೇಶಪುರ, ಹಾನುಬಾಳ್, ಯಸಲೂರು, ಅರೇಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರುಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.