ಕುದುರೆಮುಖ ಕಂಪನಿ ಎದುರು ಜಾಗೃತ ನಾಗರಿಕ ವೇದಿಕೆ ಧರಣಿ
ಮೂಡಿಗೆರೆ: ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯವನ್ನು ಮುನ್ನಡೆಸಲು ಕಂಪೆನಿಯು ಹಣಕಾಸಿನ ವ್ಯವಸ್ಥೆ ಮಾಡಬೇಕು. ಇಲ್ಲಿಯ ಯಂತ್ರೋಪಕರಣ ಬಿಚ್ಚಿ ಸಾಗಿಸುವ ಕೆಲಸದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಅಲ್ಲದೆ ಭಾರಿ ಗಾತ್ರದ ವಾಹನಗಳಲ್ಲಿ ಅತೀ ಭಾರದ ಸರಕು ಸಾಗಿಸಿ ರಸ್ತೆ ಹಾಳಾಗುತ್ತಿರುವುದರಿಂದ ರಸ್ತೆಯ ದುರಸ್ತಿ ಕಾರ್ಯಕ್ಕೆ ಕಂಪನಿಯಿಂದ ಹಣ ಮೀಸಲಿಡುವಂತೆ ಒತ್ತಾಯಿಸಿ ಜಾಗೃತ ನಾಗರಿಕ ವೇದಿಕೆಯಿಂದ ಕುದುರೆಮುಖ ಕಂಪನಿ ಎದುರು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
ಮುಖಂಡ ರವಿ ರೈ ಮಾತನಾಡಿ, ಕುದುರೇಮುಖ ಕೇಂದ್ರೀಯ ವಿದ್ಯಾಲಯಕ್ಕೆ ಅನುದಾನ ಕೊಟ್ಟು ನಡೆಸಲು ನಿಮ್ಮಿಂದ ಸಾದ್ಯವಿಲ್ಲದಿದ್ದರೆ ನೀವು ಇಲ್ಲಿಂದ ಜಾಗ ಖಾಲಿ ಮಾಡುವಂತೆ ಒತ್ತಾಯಿಸಿದರು. ಇಲ್ಲಿಯ ಫಲವತ್ತಾದ ಭೂಮಿ ಬಳಸಿಕೊಂಡು, ಸುಂದರ ಪರಿಸರ ಹಾಳು ಮಾಡಿ ಸಾವಿರಾರು ಕೋಟಿ ಆದಾಯ ಮಾಡಿಕೊಂಡ ಕಂಪನಿ ಇವತ್ತು ನೂರಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟ ಆಡುತ್ತಿದೆ. ಕಂಪನಿ ಮುಚ್ಚುಗಡೆಯಾದರೂ ಕಂಪನಿಗೆ ಲಾಭ ತರುವ ಇಲ್ಲಿ ವಸತಿಗೃಹ ನಡೆಸಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಬ್ರಹ್ಮದೇವ, ಅನಿಲ್, ಪದ್ಮಕುಮಾರ್, ಸುರೇಶ್ಭಟ್, ರಾಮಮೂರ್ತಿ, ಪ್ರವೀಣ್, ವಿಶ್ವನಾಥ ಗೌಡ, ಮಂಜಪ್ಪ ಪೂಜಾರಿ, ಶ್ರೇಯಾಂಶ ಜೈನ್, ರಾಘವೇಂದ್ರ ಮುಂತಾದವರು ಇದ್ದರು.
ಸುಂದರ ಸಮಾಜಕ್ಕಾಗಿ ಪರಿಸರ ಸಂರಕ್ಷಿಸೋಣ
ಚಿಕ್ಕಮಗಳೂರು: ಸುಂದರ ಸಮಾಜಕ್ಕಾಗಿ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಂದ್ರೇಶ್ ಕರೆ ನೀಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪರಿಸರ ಮಾಲಿನ್ಯದಿಂದಾಗಿ ಇಂದು ಭೂಮಿ, ನೀರು, ಗಾಳಿ, ಬೆಳಕು ಸೇರಿದಂತೆ ಎಲ್ಲವೂ ವಿಷಮಯವಾಗುತ್ತಿದೆ. ಪರಿಣಾಮ ಹಿಂದೆಂದೂ ಕಂಡುಕೇಳದಂತ ರೋಗಗಳು ನಮ್ಮನ್ನು ಬಾಧಿಸುತ್ತಿವೆ. ಈ ಪರಿಸ್ಥಿತಿಗೆ ನಮ್ಮಲ್ಲಿ ಪರಿಸರ ಪ್ರಜ್ಞೆ ಹಾಗೂ ಕಾಳಜಿ ಇಲ್ಲದಿರುವುದೇ ಮೂಲ ಕಾರಣವಾಗಿದೆ ಎಂದು ತಿಳಿಸಿದರು. ಹಿರಿಯರು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿರುವ ಈ ಪರಿಸರವನ್ನು ಸ್ವಚ್ಛವಾಗಿಡುವುದರ ಜೊತೆಗೆ ಗಿಡಮರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಯನ್ನು ಆರೋಗ್ಯವಂತರಾಗಿಸಲು ಪರಿಸರ ಕಾಪಾಡುಬೇಕಿದೆ ಎಂದರು. ಮುಖ್ಯ ಅತಿಥಿ ವಿಭಾಗೀಯ ಭಾರತ ಸೇವಾದಳ ಸಂಘಟಕ ರವಿಶಂಕರ್ ಮಾತನಾಡಿ, ಪರಿಸರ ಉಳಿಸುವ ಕಟೀಬದ್ಧತೆ ನಿಮ್ಮಲ್ಲಿರಬೇಕು. ನಿಮ್ಮ ವ್ಯಕ್ತಿಗತ ನೆಲೆಗಟ್ಟಿನಲ್ಲಿ ಪರಿಸರ ರಕ್ಷಣೆಗೆ ನಿಮ್ಮ ಶಾಲೆ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿಯೊಬ್ಬರು ಒಂದೊಂದು ಗಿಡವನ್ನು ನೆಡಬೇಕೆಂದರು. ಶಾಲಾ ಮುಖ್ಯ ಶಿಕ್ಷಕ ಲೋಕೇಶ್ವರಾಚಾರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಸಾವಿತ್ರಮ್ಮ ವಂದಿಸಿದರು. ನಾಗವೇಣಿ ನಿರೂಪಿಸಿದರು.