ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆತ್ಮಹತ್ಯೆಗೆ ಇನಾಂ ನಿವಾಸಿಗಳ ಯತ್ನ

Vishwanath S
Updated On : 11 Jun 2014, 11:29 am

ಚಿಕ್ಕಮಗಳೂರು: ತಮ್ಮನ್ನು ತೆರವುಗೊಳಿಸಬಾರದೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಕಳಸದ ಇನಾಂ ಭೂಮಿ ನಿವಾಸಿಗರು ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದರು.
ಧರಣಿಯಲ್ಲಿ ಪಾಲ್ಗೊಂಡಿದ್ದ ಆ ಭಾಗದ ನಿವಾಸಿಗರಾದ ಸವಿಂಜ್ ಜೈನ್ ಹಾಗೂ ಮತ್ತೊಬ್ಬರು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ಇತರರು ಅವರನ್ನು ತಡೆದು ಮುಂದಾಗುವ ಅನಾಹುತ ತಪ್ಪಿಸಿದರು.
ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದನ್ನು ಕಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಲು ಮುಂದಾದರು. ಪ್ರವೇಶ ದ್ವಾರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಆಗ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ಪರಿಸ್ಥಿತಿಯನ್ನು ಅರಿತ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಇನಾಂ ಭೂಮಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಅದರ ಪ್ರಕಾರ ಅರಣ್ಯ ಇಲಾಖೆ ಕ್ರಮ ವಹಿಸಿದೆ. ಆದರೆ, ಇದರಿಂದ 10 ಎಕರೆ ಒಳಪಟ್ಟ ಒತ್ತುವರಿದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.
ಕಳಸದ ಇನಾಂ ಭೂಮಿಯಲ್ಲಿರುವವರನ್ನು ತೆರವುಗೊಳಿಸಿದರೆ ಅದರಿಂದಾಗುವ ಸಾಧಕ ಬಾಧಕಗಳ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇಲ್ಲಿನ ಜನರನ್ನು ತೆರವುಗೊಳಿಸಿದರೆ ಅವರಿಗೆ ಸೂಕ್ತ ಪರಿಹಾರ ನೀಡಲು ಹಾಗೂ ಹಾಲಿ ಇರುವ ಭೂಮಿಯನ್ನು ಅಲ್ಲಿನವರಿಗೆ ಬಿಟ್ಟು, ಅರಣ್ಯ ಇಲಾಖೆಗೆ ಬದಲಿ ಭೂಮಿ ನೀಡುವ ಬಗ್ಗೆಯೂ ಯೋಚಿಸಲಾಗಿದೆ.
ಈ ಕುರಿತು ಸರ್ಕಾರ ಸದ್ಯದಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ. ಆದುದರಿಂದ ಪ್ರತಿಭಟನಾಕಾರರು ಇಂಥ ಅನಾಹುತಗಳಿಗೆ ಕೈ ಹಾಕಬಾರದು ಎಂದು ತಿಳಿಸಿದರು.
ಸರ್ಕಾರ ಮಧ್ಯೆಪ್ರವೇಶಕ್ಕೆ ರೈತಸಂಘದ ಆಗ್ರಹ
ಚಿಕ್ಕಮಗಳೂರು: ಇನಾಂ ಭೂಮಿಯಲ್ಲಿ ವಾಸವಾಗಿರುವ ಜನರನ್ನು ಒಕ್ಕಲೆಬ್ಬಿಸದಂತೆ ಸರ್ಕಾರ ಮಧ್ಯೆ ಪ್ರವೇಶಿಸಿ ಜನರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ ಆಗ್ರಹಿಸಿದ್ದಾರೆ.
ಇನಾಂ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಈಗ ಬದುಕಿನ ಪ್ರಶ್ನೆ ಎದುರಾಗಿದೆ. ಇಲ್ಲಿ ವಾಸವಾಗಿರುವ ಬಡವರನ್ನು ಪರಕೀಯರಂತೆ ಕಾಣಲಾಗುತ್ತಿದೆ, ಇದಕ್ಕೆ ಇತಿಶ್ರೀ ಹಾಡಲು ಸರ್ಕಾರ ಮಧ್ಯ ಪ್ರವೇಶಿಸುವುದು ಅಗತ್ಯವಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಂಗಳವಾರ ತಿಳಿಸಿದರು.
ಇನಾಂ ಪ್ರದೇಶದ ದೇವರಬೆಟ್ಟ, ಕರಿಮನೆ, ಮಾವಿನಕೆರೆ ತೋಟದೂರು ಮತ್ತು ಬಲಿಗೆ ಗ್ರಾಮದ ಅಧಿಸೂಚಿತ ಪ್ರದೇಶದ ಐದು ಬ್ಲಾಕ್‌ಗಳಲ್ಲಿ ದೇವರಬೆಟ್ಟವನ್ನು ಕಳೆದ 1933 ರಲ್ಲಿ ಅಧಿಸೂಚಿತ ಪ್ರದೇಶದಿಂದ ಮರು ವರ್ಗಾವಣೆಗೊಂಡಿರುವ ದಾಖಲೆ ಇದೆ ಎಂದು ಹೇಳಿದರು.
ಕರ್ನಾಟಕ ಇನಾಂ ರದ್ಧತಿ ಕಾಯ್ದೆ 1955 ರ ಪೂರ್ವದಲ್ಲಿ ಮೈಸೂರು ಧಾರ್ಮಿಕ ಮತ್ತು ದತ್ತಿ ಕಾಯ್ದೆ 1927ರ ಮುಜರಾಯಿ ಆಯುಕ್ತರು ಬಹಳಷ್ಟು ಜಮೀನು ಮಂಜೂರು ಮಾಡಿರುತ್ತಾರೆ. ಉಳುವವನೆ ಭೂ ಒಡೆಯ ನಿಯಮದಡಿ ಕೆಲವರು ಜಮೀನು ಪಡೆದುಕೊಂಡಿದ್ದಾರೆ. ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವಂತೆ ಕೋರಿ ಹಲವರು ಫಾರಂ ನಂಬರ್ 50 ಮತ್ತು 53ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆಂಬ ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ. ದಯಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜ್, ಹೋರಾಟ ಸಮಿತಿ ಮುಖಂಡ ಗೋಪಾಲಗೌಡ, ಉದ್ದೇಗೌಡ, ಲಿಂಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement