ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತರೀಕೆರೆಯಲ್ಲಿ ವೈಭವದ ದಿಂಡಿ ಉತ್ಸವ

Vishwanath S
Updated On : 11 Jun 2014, 11:29 am

ಕ.ಪ್ರ.ವಾರ್ತೆ, ತರೀಕೆರೆ, ಜೂ.10
ಭಾವಸಾರ ಕ್ಷತ್ರಿಯ ದೈವ ಮಂಡಳಿ ಹಾಗೂ ಭಜನಾ ಮಂಡಳಿ ವತಿಯಿಂದ ಪಟ್ಟಣದಲ್ಲಿ ಶ್ರೀವಿಠಲ ರುಕುಮಾಯಿಯವರ ದಿಂಡಿ ಉತ್ಸವ ಏರ್ಪಡಿಸಲಾಗಿತ್ತು.
ಧ್ವಜಾರೋಹಣ ಮತ್ತು ಜ್ಞಾನೇಶ್ವರಿ ಗ್ರಂಥ ಸ್ಥಾಪನೆ, ಸಂತಭೇಟಿ ಧ್ವಜಪೂಜೆಯೊಂದಿಗೆ 27ನೇ ದಿಂಡಿ ಉತ್ಸವ ಕಾರ್ಯಕ್ರಮಗಳು ಆರಂಭಗೊಂಡವು. ಕಾಕಡಾರತಿ, ದುರ್ಗಮ್ಮ ಅವರಿಗೆ ಎಳೆನೀರು ಅಭಿಷೇಕ, ಮಹಾಪೂಜೆ, ಶ್ರೀಮೈಲಾರಲಿಂಗೇಶ್ವರಸ್ವಾಮಿಯ ದೋಣಿ ಸೇವೆ, ರುಕ್ಮಾಯಿದೇವಿ ಮತ್ತು ಪಾಂಡುರಂಗಸ್ವಾಮಿ ಅವರಿಗೆ ಅಭಿಷೇಕ ಮಹಾಪೂಜೆ, ಹರಿಪಾಠ ಭಜನೆ, ನಾಮಜಪ ಮತ್ತು ಜ್ಞಾನೇಶ್ವರಿ ಪ್ರವಚನ ಏರ್ಪಡಿಸಲಾಗಿತ್ತು.
ಶಿವಮೊಗ್ಗ ಹನುಮಂತರಾವ್ ರಂಗಧೋಳ್ ಅವರಿಂದ ಶ್ರೀಪಂಢರಿ ಸಾಂಪ್ರದಾಯಿಕ ಕೀರ್ತನೆ ಮತ್ತು   ಶಿವಮೊಗ್ಗ ಖ್ಯಾತ ಗಾಯಕರಾದ ಸುರೇಖಾ ಹೆಗ್ಗಡೆ ಅವರಿಂದ ವಿಶೇಷ ಸಂತವಾಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಲಾವಿದರಾದ ತುಕಾರಾಂ ರಂಗಧೋಳ್, ಟಿ.ಆರ್. ವಿಠಲ್ ಪಕ್ಕವಾದ್ಯ ನುಡಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಢರಿ ಭಜನೆಯೊಂದಿಗೆ ಶ್ರೀವಿಠಲ ರುಕ್ಮಾಯಿ ಅವರ ರಾಜಬೀದಿ ಉತ್ಸವ ನಡೆಯಿತು. ನಂತರ ದೇವಸ್ಥಾನದಲ್ಲಿ ಭದ್ರಾವತಿ ಎಂ.ಎಸ್.ನಾಗರಾಜರಾವ್ ಮಹೇಂದ್ರಕರ್ ಅವರಿಂದ ಕಾಲಕೀರ್ತನೆ ಏರ್ಪಡಿಸಲಾಗಿತ್ತು.
'ಮುಚ್ಚುವ ಹಂತಕ್ಕೆ ಕೇಂದ್ರೀಯ ವಿದ್ಯಾಲಯ'
ಮೂಡಿಗೆರೆ: ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದಾಗಿ ಕುದುರೆಮುಖದ ಕೇಂದ್ರೀಯ ವಿದ್ಯಾಲಯ ಮುಚ್ಚುವ ಹಂತ ತಲುಪಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಸಂಚಾಲಕ ನಾಗೇಶ್ ಆಂಗೀರಸ ಹೇಳಿದರು.
ಜಾಗೃತ ನಾಗರಿಕ ವೇದಿಕೆ ಕಳಸ ಇವರು ಕುದುರೆಮುಖ ಕಂಪೆನಿ ಎದುರು ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಮುಂದುವರೆದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದರು.
ಸರ್ಕಾರ ಸರ್ವ ಶಿಕ್ಷಣ ಅಭಿಯಾನಯಡಿಯಲ್ಲಿ ಸಾವಿರಾರು ಕೋಟಿ ರು. ಗಳನ್ನು ವ್ಯಯ ಮಾಡುತ್ತಿದೆ. ಆದರೆ  ಮೂಲಭೂತ ಸೌಲಭ್ಯಗಳಿರುವಂತಹ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಂಡು ಅದನ್ನು ಬೆಳೆಸಿ ಅದನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡುವಂತಹ ಜಾಣ್ಮೆ ಸರ್ಕಾರಕ್ಕಿಲ್ಲ. ಒಂದು ಕಡೆ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ಎನ್ನುತ್ತಾ ಇನ್ನೊಂದು ಕಡೆ ವಿದ್ಯಾ ಸಂಸ್ಥೆ ಮುಚ್ಚಲು ಹೊರಟಿದೆ ಎಂದು ಹೇಳಿದರು. ಅನಿಲ್ ಲೆವಿನ್, ವಿಶ್ವನಾಥಗೌಡ, ಶ್ರೇಯಾಂಸ ಜೈನ್, ರಾಘವೇಂದ್ರ ಭಟ್, ರಾಮಮೂರ್ತಿ, ಪ್ರವೀಣ್, ವಸಂತ ಮುಂತಾದವರು ಇದ್ದರು.
ಕ್ಷೇತ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಂಕಲ್ಪ: ದತ್ತ
ಬೀರೂರು: ಕಡೂರು ಕ್ಷೇತ್ರದ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಕ್ಷಿಪ್ರ ಪರಿಹಾರದ ಪರ್ವಕಾಲ ಆರಂಭವಾಗುತ್ತಿದ್ದು, ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಂಕಲ್ಪಿಸುವುದಾಗಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.
ಪುರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಂತ ವಿಶೇಷ ಪ್ರಕರಣದಲ್ಲಿ ಕಳೆದ 6-7 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಸತಿ ನಿವೇಶನ ಮಂಜೂರಾದರೂ ಹಕ್ಕು ಪತ್ರ ಪಡೆಯುವಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಬಗೆಹರಿಸಿ 17ನೇ ವಾರ್ಡ್ ವ್ಯಾಪ್ತಿಯ ಬಳ್ಳಾರಿ ಕ್ಯಾಂಪ್ ಬಡಾವಣೆಯ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಜಿಪಂ ಸದಸ್ಯ ಬಿ.ಪಿ. ನಾಗರಾಜ್, ಪುರಸಭೆ ಅಧ್ಯಕ್ಷೆ ಗೀತಾ ಹೇಮಂತ್, ಮುಖ್ಯಾಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪಕ  ಚಂದ್ರಶೇಖರ್, ಸದಸ್ಯ ಮಂಜುನಾಥ್, ಬಸವರಾಜ್, ಜೆಡಿಎಸ್ ತಾ. ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ಬೀರೂರು ಘಟಕ ಕಾರ್ಯಾಧ್ಯಕ್ಷ ಜಗದೀಶ್, ಆರೋಗ್ಯಾಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.
ಆಸ್ಪತ್ರೆಯೊಳಗೇ ಬಂದ ವಾಮಾಚಾರ: ರಕ್ತ ಪರೀಕ್ಷೆಗೆಂದು ಬಂದವರು ಪರಾರಿ
ಮೂಡಿಗೆರೆ:  ಕಳೆದ ಹಲವು ವರ್ಷಗಳಿಂದ ನೂರು ಹಾಸಿಗೆಗಳ ಮೂಡಿಗೆರೆ ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳುಪರದಾಡುತ್ತಿದ್ದಾರೆ. ಈಗ ಇದೇ ಆಸ್ಪತ್ರೆಯ ಒಳಗೆ ವಾಮಾಚಾರ ನಡೆಸಿರುವುದರಿಂದ ರೋಗಿಗಳು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿರುವ ಪ್ರಕರಣ ಮಂಗಳವಾರ ನಡೆದಿದೆ.
ತಾಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಿಯಾದ ಮಳೆ ಇಲ್ಲದೆ ಜ್ವರದಿಂದ ಬಳಲುತ್ತಿದ್ದರೆ. ಸಕ್ಕರೆ ಕಾಯಿಲೆ ಮತ್ತು ಟಿ.ಬಿ.ಯಂತಹ ಕಾಯಿಲೆಯಿಂದ ನರಳುತ್ತಿರುವ ರೋಗಿಗಳು ರಕ್ತ, ಕಫ ಮತ್ತು ಮೂತ್ರ ಪರೀಕ್ಷೆಗೆಂದು ಬೆಳಗ್ಗೆ 9 ಗಂಟೆಗೆ ಆಗಮಿಸಿದ ಸಾರ್ವಜನಿಕರು ರಕ್ತ ಪರೀಕ್ಷಾ ಕೇಂದ್ರದ ಬಾಗಿಲಲ್ಲಿ ಮೊಟ್ಟೆ ಒಡೆದು ಕುಂಕುಮ ಹಚ್ಚಿದ ನಿಂಬೆಹಣ್ಣನ್ನು ಹಾಕಿ ವಾಮಾಚಾರ ನಡೆದಿರುವುದನ್ನು ಗಮನಿಸಿದ ತಕ್ಷಣ ಎದ್ದೆವೋ, ಬಿದ್ದೆವೋ ಎಂದು ಆಸ್ಪತ್ರೆಯಿಂದ ಹೊರಕ್ಕೆ ಓಡಿದ ಘಟನೆ ನಡೆದಿದೆ.
ಈಗ ಆಸ್ಪತ್ರೆಗೆ ತೆರಳಲು ಸಾರ್ವಜನಿಕರು ಭಯಗ್ರಸ್ಥರಾಗಿದ್ದಾರೆ. ಇದು ಯಾವ ಉದ್ದೇಶ ಇಟ್ಟುಕೊಂಡು ವಾಮಾಚಾರ ನಡೆಸಿದ್ದಾರೋ ತಿಳಿಯದಂತಾಗಿದೆ. ಮೊದಲೇ ವೈದ್ಯರ ಕೊರತೆ ಎದುರಿಸುತ್ತಿರುವ ಆಸ್ಪತ್ರೆ ಇನ್ನು ಮುಂದೆ ಸಿಬ್ಬಂದಿಗಳ ಕೊರತೆಯನ್ನು ಎದುರಿಸಬೇಕಾಗುತ್ತದೆ. ಕಾರಣ ಆಸ್ಪತ್ರೆಯ ಇತಿಹಾಸಲ್ಲೇ ಇದುವರೆಗೂ ನಡೆಯದ ವಾಮಾಚಾರ ಈಗ ನಡೆದಿದೆ ಎಂದರೆ, ಇದು ದುರುದ್ದೇಶದಿಂದ ನಡೆಸಿರುವ ಕೆಲವು ವ್ಯಕ್ತಿಗಳ ಕೈವಾಡ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಆಸ್ಪತ್ರೆಯ ಒಳಗೆ ಬಾಣಂತಿಯರು ಇತರೆ ಕಾಯಿಲೆಯಿಂದ ನರಳುತ್ತಿರುವ ರೋಗಿಗಳು ಇದ್ದು. ವಾಮಾಚಾರದಂತ ಪ್ರಸಂಗಗಳು ನಡೆದಿದ್ದರಿಂದ ಏನಾದರೂ ಹೆಚ್ಚು ಕಡಿಮೆಯಾದರೇ ಇದಕ್ಕೆ ಯಾರನ್ನು ಹೊಣೆ ಮಾಡುವುದು ಎಂಬುವುದು ಕೆಲವರ ವಾದ.
ವಾಮಾಚಾರದ ಪ್ರಕರಣದಿಂದ ರಕ್ತ ಪರೀಕ್ಷೆಗೆ ಬಂದ ರೋಗಿಗಳು ಸ್ಥಳದಿಂದ ತೆರಳಿದ ಬಗ್ಗೆ ಸಿಬ್ಬಂದಿ ಆಡಳಿತ ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಶಾರದಾ ಪೀಠಕ್ಕೆ ಜಾರ್ಜ್ ಭೇಟಿ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದರು. ನಂತರ ತೋರಣಗಣಪತಿ, ಶಂಕರಾಚಾರ್ಯ, ವಿದ್ಯಾಶಂಕರ ದೇವಾಲಯಗಳಿಗೆ ತೆರಳಿ ದರ್ಶನ ಪಡೆದು ನರಸಿಂಹವನದಲ್ಲಿನ ಗುರುನಿವಾಸದಲ್ಲಿ ಭಾರತೀ ತೀರ್ಥರನ್ನು ಭೇಟಿ ಮಾಡಿ ಆರ್ಶಿವಾದ ಪಡೆದರು. ನಂತರ ಆಗುಂಬೆ ಮೂಲಕ ಚಿಕ್ಕಮಗಳೂರಿಗೆ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement