ಗೋರಿಗಂಡಿ ದರ್ಗಾ ಉರುಸ್
ಚಿಕ್ಕಮಗಳೂರು: ಸತ್ಕರ್ಮಗಳೇ ದೇವರಿಗೆ ಪ್ರಿಯವಾದ ಶ್ರೇಷ್ಠ ಆರಾಧನೆ ಎಂದು ಬಾಳೆಹೊಳೆ ಜುಮ್ಮ ಮಸೀದಿ ಹಜರತ್ ಎಂ.ಪಿ. ಹಸನ್ ಮುಅಲ್ಲಿಂಮುಕ್ಕ ಹೇಳಿದರು. ಸಂಗಮೇಶ್ವರಪೇಟೆ ಸಮೀಪದ ಗೋರಿಗಂಡಿ ದರ್ಗಾ ಉರುಸ್ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೀತಿ ಇಲ್ಲದ ಹೃದಯದಲ್ಲಿ ಸತ್ಯ, ವಿಶ್ವಾಸ ಇರುವುದಿಲ್ಲ ಎಂದು ಪ್ರವಾದಿ ಮಹಮ್ಮದ್ ಹೇಳಿದ್ದರು. ದ್ವೇಷ, ಅಸೂಯೆ ಇಲ್ಲದ ಹೃದಯ ಸ್ವಚ್ಛ ಶುದ್ಧವಾಗಿದ್ದರೆ ದೇವರು ಕೃಪೆ ತೋರುತ್ತಾನೆ. ಮನಸ್ಸು ಶಿಥಿಲಗೊಂಡಿರುವ ಈ ಸಂದರ್ಭದಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಮುಖ್ಯ ಎಂದರು.
ಬಾಳೆಹೊನ್ನೂರಿನ ಮೌಲಾನ ಮುಫ್ತಿ ್ತಅಸದುಲ್ಲಾ ಮಿಸ್ಬಾಹಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋರಿಗಂಡಿ ಜಾಮೀಯ ಮಸೀದಿ ಖತೀಬ್ ಸೈಪುದ್ದೀನ್ ನಿರಜ್ಹಿ ನೇತೃತ್ವ ವಹಿಸಿದ್ದರು.
ಜಾಮೀಯಾ ಮಸೀದಿ ಖತೀಬ್ ಮೌಲಾನ ಮಹಮ್ಮದ ಕಾಶಿಫ್ ರಜ್ಹಾ, ಮೂಡಿಗೆರೆಯ ಜಾಮೀಯಾ ಮಸೀದಿ ಖತೀಬ್ ಮೌಲಾನ ಅಲ್ಹಾಜ್ ಅಕ್ಬರ್ ಅಲಿ ಖನ್ಸಾಬ್ ರಜ್ಹ್ ಮತ ಪ್ರಸಂಗ ನಡೆಸಿಕೊಟ್ಟರು.
ಮೌಲಾನ ದಾದಾಪೀರ್ ಕೊಡ್ಲಿಪೇಟೆಯ ಬಾಲಕ ತನ್ವೀರ್ ಅವರ ನ್ವಾತ್ ಖ್ವಾನ್ ಗಮನ ಸೆಳೆಯಿತು. ಗೋರಿಗಂಡಿ ಅಜ್ಹ್ರತ್ ಖ್ವಾಜ್ ಅಸ್ ಹಾಬುನ್ನಬಿ ದರ್ಗಾ ಸಮಿತಿ ಅಧ್ಯಕ್ಷ ಎಸ್.ವೈ. ಮುಕ್ತಾರ್ ಅಹಮ್ಮದ್ ರಜ್ಹಿ, ಗೌರವಾಧ್ಯಕ್ಷ ಎಂ. ಗೌಸ್, ಮಹಮ್ಮದ್ ಖಾಸಿಮ್, ಮಂಡಲ ಮಾಜಿ ಪ್ರಧಾನ ಕೆ. ಮಹಮ್ಮದ್ ಉಪಸ್ಥಿತರಿದ್ದರು. ಎಂ.ಪಿ. ಷೇಕ್ ಅಹಮ್ಮದ್ ನಿರೂಪಿಸಿದರು.
ದರ್ಗಾದಲ್ಲಿ ಸಂಜೆ ಫಾತಿಹ ನಂತರ ಸಂದಲ್ ಹೂ ಮತ್ತು ಚಾದರ್ ಅರ್ಪಿಸಲಾಯಿತು. ಹಿಂದೂ, ಮುಸ್ಲಿಂ, ಕ್ರೈಸ್ತ ಕುಟುಂಬಗಳು ದರ್ಗಾಕ್ಕೆ ಹೂ, ಊದುಬತ್ತಿ, ಸಿಹಿ, ಕಾಣಿಕೆ ಅರ್ಪಿಸಿದರು.