ಫಲಾನುಭವಿಗಳಿಗೆ ಜೇನು ಕುಟುಂಬ, ಪೆಟ್ಟಿಗೆ ವಿತರಣೆ
ಚಿಕ್ಕಮಗಳೂರು: ಜೇನು ಕೃಷಿಯಿಂದ ಪರಾಗಸ್ಪರ್ಶ ಪರಿಣಾಮಕಾರಿಯಾಗಿ ತೋಟಗಾರಿಕಾ ಬೆಳೆಗಳ ಉತ್ಪತ್ತಿ ಗಣನೀಯವಾಗಿ ಹೆಚ್ಚುತ್ತದೆ ಎಂದು ಜಿಪಂ ಸದಸ್ಯ ನಾಗರಾಜ್ ಹೇಳಿದರು.
ಹುಯಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ತರಬೇತಿ ಪಡೆದ ರೈತ ಫಲಾನುಭವಿಗಳಿಗೆ ತೋಟಗಾರಿಕಾ ಇಲಾಖೆಯಿಂದ ಜೇನುಕುಟುಂಬ ಹಾಗೂ ಜೇನುಪೆಟ್ಟಿಗೆ ವಿತರಿಸಿ ಮಾತನಾಡಿದರು.
ಜೇನುಕೃಷಿ ಮತ್ತು ಬಳಕೆ ಅನಾದಿಕಾಲದಿಂದ ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ. ಮಲೆನಾಡಿನಲ್ಲಿ ಬಹುತೇಕ ಬೆಳೆಗಾರರು ಉಪ ಕಸುಬಾಗಿ ಜೇನು ಸಾಕಾಣಿಕೆ ಮಾಡಿಕೊಂಡು ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಕುಂಠಿತಗೊಂಡಿದೆ. ಜೇನುಪಾಲನೆಗೆ ಸರ್ಕಾರ ನೆರವು, ತರಬೇತಿ ನೀಡುತ್ತಿದೆ. ಇಂದು 12 ಗಿರಿಜನ ಕುಟುಂಬಗಳಿಗೆ 36 ಪೆಟ್ಟಿಗೆಯ ಜೊತೆಗೆ ಜೇನು ಕುಟುಂಬಗಳನ್ನು ವಿತರಿಸುತ್ತಿದ್ದು, ಇತರೆ 8 ರೈತರಿಗೂ ತಲಾ ಒಂದರಂತೆ ಪೆಟ್ಟಿಗೆ ಹುಳು ರಿಯಾಯಿತಿ ದರದಲ್ಲಿ ಒದಗಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಯೋಜನೆಯಲ್ಲಿ 20 ಜನರಿಗೆ ರು. 30 ಸಾವಿರ ಸಹಾಯಧನ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಲ್ಲಿ 75 ಗಿರಿಜನರಿಗೆ ರು. 1.12 ಲಕ್ಷ ಸಹಾಯಧನವನ್ನು ಜೇನು ಪಾಲನೆಗಾಗಿ 2013-14ನೇ ಸಾಲಿನಲ್ಲಿ ವಿತರಿಸಲಾಗಿದೆ ಎಂದರು. ಹುಯಿಗೆರೆ ಗ್ರಾಪಂ ಅಧ್ಯಕ್ಷೆ ಸುನಂದಾ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಎಚ್.ಸಿ. ಮಂಜುನಾಥ, ಹುಯಿಗೆರೆ ವಾಸಪ್ಪಗೌಡ, ಎನ್.ಎಸ್. ಕೃಷ್ಣಪ್ಪಗೌಡ, ಗ್ರಾಪಂ ಸದಸ್ಯ ಶ್ರೀನಿವಾಸ, ಸ್ಥಳೀಯ ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಪ್ಪ, ಎಚ್.ಎಸ್. ರವಿ ಮತ್ತು ಎಚ್.ಎಸ್. ಪುಟ್ಟೇಗೌಡ ವೇದಿಕೆಯಲ್ಲಿದ್ದರು. ಜೇನುಕೃಷಿ ಪ್ರದರ್ಶಕ ಜೆ.ಎಸ್. ಸೋಮಶೇಖರ್ ಸ್ವಾಗತಿಸಿದರು.
ಸಂಭ್ರಮದ ಬ್ರಹ್ಮ ರಥೋತ್ಸವ
ಕಡೂರು: ಪಟ್ಟಣದ ಗ್ರಾಮ ದೇವರಾದ ಛತ್ರದ ಬೀದಿಯಲ್ಲಿರುವ ವೀರಭದ್ರಸ್ವಾಮಿ ಬ್ರಹ್ಮ ರಥೋತ್ಸವವು ಅದ್ಧೂರಿಯಾಗಿ ನೆರವೇರಿತು.
ಕೆಂಚಾಂಬ, ಸ್ವರ್ಣಾಂಬ, ಕಾಳಿಕಾಂಬ, ಬನಶಂಕರಮ್ಮ, ಭೈರೇದೇವರು, ಕರಿಯಮ್ಮ ದೇವರ ಜತೆ ವೀರಭದ್ರಸ್ವಾಮಿಯವರ ದೇವಾಲಯದಿಂದ ಕೋಲಾಟ, ವೀರಗಾಸೆ, ಕೀಲುಕುದುರೆ, ಚೋಮನ ಕುಣಿತ, ಡೊಳ್ಳುಕುಣಿತ, ಬಾಣ ಬಿರುಸು ಮುಂತಾದ ಆಕರ್ಷಕವಾದ ಮದ್ದು- ಗುಂಡು ಸಿಡಿಸುವ ಮೂಲಕ ಮೆರವಣಿಗೆ ಮಾಡಲಾಯಿತು.
ಹನ್ನೆರಡು ಹರಿವಾಣದ ಗುಡಿಕಟ್ಟಿನ ಸಮಿತಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಪ್ರಧಾನ ಗುರುಗಳಾದ ಕೆ.ಹೊಸಳ್ಳಿಯ ಕುಮಾರಸ್ವಾಮಿ, ಎಚ್.ಎಂ. ಲೋಕೇಶ್, ಗೋವಿಂದಪ್ಪ, ಶರತ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಬಾವುಟದ ಹರಾಜು ನಡೆಯಿತು. ಪ್ರತಿ ವರ್ಷದಂತೆ ಈ ವರ್ಷ ನಡೆದ ಬಾವುಟ ಹರಾಜಿನಲ್ಲಿ ಕಡೂರಿನ ದೊಡ್ಡಪೇಟೆಯ ಕಜ್ಜಳ್ಳಿ ಸುರೇಶ್ ಎಂಬವರು 1.65 ಲಕ್ಷಕ್ಕೆ ಬಾವುಟ ಹರಾಜು ಕೂಗಿದರು.
ಮಧ್ಯಾಹ್ಮ 12ರಿಂದ 2.45ರ ಶುಭ ಸಿಂಹ ಲಗ್ನದಲ್ಲಿ ವೀರಭದ್ರಸ್ವಾಮಿ ಜತೆ ಭದ್ರಕಾಳಮ್ಮ ಅವರನ್ನು ಸಿಂಗರಿಸಿದ ರಥದಲ್ಲಿ ಕುಳ್ಳಿರಿಸಿದ ಭಕ್ತರು ರಥ ಎಳೆಯುವ ಮೂಲಕ ಪಟಾಕಿ ಸಿಡಿಸಿ, ಜಯಘೋಷ ಕೂಗಿ ಹಷೋದ್ಗಾರದಿಂದ ರಥ ಎಳೆದರು. ಹರಕೆ ಹೊತ್ತ ಮಹಿಳೆಯರು ಉರುಳು ಸೇವೆ ಮಾಡಿದರು. ಬಾಳೆ ಹಣ್ಣುಗಳನ್ನು ರಥದ ಕಳಸಕ್ಕೆ ಎಸೆದರು. ಪ್ರತಿ ವರ್ಷದಂತೆ ಈ ಬಾರಿಯೂ ಸ್ವಾಮಿಯವರ ರಥೋತ್ಸವದಲ್ಲಿ ನೂತನ ದಂಪತಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು. ಪುರಸಭಾ ಸದಸ್ಯರಾದ ಎಂ. ಸೋಮಶೇಖರ್, ಕೋಳಿ ಲೋಕೇಶ್, ತೋಟದಮನೆ ಮೋಹನ್, ಕೆ.ಜಿ. ಶ್ರೀನಿವಾಸಮೂರ್ತಿ, ಕೆ.ಎಸ್. ಆನಂದ್, ಅಂಗಡಿ ಗೋವಿಂದಪ್ಪ, ನಲ್ಲೂರಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಮುಂದಿನ ಪೀಳಿಗೆಗೆ ಸಾವಯವ ಕೃಷಿ ಅವಶ್ಯಕ
ತರೀಕೆರೆ: ಮುಂದಿನ ಪೀಳಿಗೆಗೆ ಭೂಮಿ ಉಳಿಸಲು ಸಾವಯವ ಕೃಷಿ ಅಳವಡಿಸಿ ಕೊಳ್ಳುವುದು ಅವಶ್ಯಕ ಎಂದು ವಿಕಸನ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಎಂ.ಎಚ್.ಲಕ್ಷ್ಮಣ್ ತಿಳಿಸಿದರು.
ಸಮೀಪದ ಕೆಸರುಗೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಇಲಾಖೆ ಸಹಯೋಗದೊಂದಿಗೆ ಸಾವಯವ ಭಾಗ್ಯ ಯೋಜನೆ ಅನುಷ್ಠಾನ ಗೊಳಿಸುವ ಹಿನ್ನ್ನೆಲೆಯಲ್ಲಿ ರೈತರಿಗೆ ಸಾವಯವ ಕೃಷಿ ತತ್ವಗಳು ಮತ್ತು ಆದರ ಪರಿಕಲ್ಪನೆಯ ಮಹತ್ವದ ಬಗ್ಗೆ ಏರ್ಪಾಡಾಗಿದ್ದ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಭೂಮಿ ಉಳಿಸ ಬೇಕಾದರೆ ಸಾವಯವ ಕೃಷಿ ಅಳವಡಿಸಿಕೊಳ್ಳುವುದು ಅವಶ್ಯಕ. ಸಾವಯವ ಕೃಷಿಗೆ ದೇಶ ವಿದೇಶಗಳಲ್ಲಿ ಆಪಾರ ಬೇಡಿಕೆ ಇದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಲಕ್ಕವಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ್ಮೂರ್ತಿ ಮಾತನಾಡಿದರು.
ಬಸವೇಶ್ವರ ಸಾವಯವ ಕೃಷಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಾರಾವ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ತರಬೇತಿಯ ನಂತರ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ತಿಳಿಸಿಕೊಡಲಾಯಿತು. ಜಲಜ, ಸತೀಶ್ಕುಮಾರ್ ಮತ್ತಿತತರು ಭಾಗವಹಿಸಿದ್ದರು.
ತನಿಕೋಡು ಶೂಟೌಟ್: 3ನೇ ಹಂತದ ನ್ಯಾಯಾಂಗ ತನಿಖೆ
ಶೃಂಗೇರಿ: ಕಳೆದ ಏ.19ರಂದು ಶೃಂಗೇರಿ ತನಿಕೋಡು ಚೆಕ್ಪೋಸ್ಟ್ ಬಳಿ ನಡೆದ ಶೂಟೌಟ್ ಪ್ರಕರಣದ 3ನೇ ಹಂತದ ನ್ಯಾಯಾಂಗ ತನಿಖೆ ತಾಲೂಕು ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ನೇತೃತ್ವದಲ್ಲಿ ಬುಧವಾರ ನಡೆಯಿತು.
ಒಟ್ಟು 15 ಜನರಿಗೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿತ್ತು. ಆದರೆ, ವಿಚಾರಣೆಗೆ ಕೇವಲ 9 ಮಂದಿ ಹಾಜರಾಗಿದ್ದರು.
ಪ್ರಕರಣದ ಎಎನ್ಎಫ್ ಸಿಬ್ಬಂದಿ ನವೀನ್ ನಾಯಕ್, ಉಪವಿಭಾಗಧಿಕಾರಿ ಚೆನ್ನಬಸಪ್ಪ, ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯ ಪ್ರಶಾಂತ್ ಭಾಗವತ್, ಘಟನೆ ವೇಳೆ ಇದ್ದ ಎಎನ್ಎಫ್ ಸಿಬ್ಬಂದಿ, ಸರ್ಕಾರೇತರ ಪ್ರತಿನಿಧಿಗಳಾದ ರವಿಶಂಕರ್, ಪ್ರದೀಪ್ ಕೊಳೆಗೆದ್ದೆ ಎಂಬವರನ್ನು ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಲಾಯಿತು.
ಆದರೆ, ಮೃತ ಕಬೀರ್ ಕುಟುಂಬದ ಸದಸ್ಯರು ಯಾರೂ ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಮೂರು ಹಂತದಲ್ಲಿ ಇದುವರೆಗೆ ಒಟ್ಟು 24 ಜನರನ್ನು ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದು ತನಿಖೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನ್ಯಾಯಾಂಗ ತನಿಖಾಧಿಕಾರಿ ಬಿ.ಎಸ್. ಶೇಖರಪ್ಪ ತಿಳಿಸಿದ್ದಾರೆ.
ಸುಬ್ರಹ್ಮಣ್ಯಸ್ವಾಮಿ ಉತ್ಸವ; ಮೆರವಣಿಗೆ
ಚಿಕ್ಕಮಗಳೂರು: ತಮಿಳು ಜನಾಂಗದವರ ಆರಾಧ್ಯ ದೈವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅವತಾರ ದಿನವಾದ ಬುಧವಾರ ಕುಮಾರಿಗಿರಿಯ ಶ್ರೀ ಸುಬ್ರಹ್ಮಣ್ಯ ಸೇವಾ ಸಮಿತಿ ಹಾಗೂ ಭಕ್ತಾದಿಗಳಿಂದ ನಗರದಲ್ಲಿ ಮೆರವಣಿಗೆ ನಡೆಯಿತು.
ಬೆಳಗ್ಗೆ 8 ಗಂಟೆಗೆ ಬೋಳರಾಮೇಶ್ವರ ದೇವಸ್ಥಾನದಿಂದ ಶ್ರೀವಳ್ಳಿ ಮತ್ತು ಶ್ರೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಮೂರ್ತಿಗಳೊಂದಿಗೆ ಕ್ಷೀರ ತುಂಬಿದ ಕಳಸಗಳು ಮೆರವಣಿಗೆ ಹೊರಟು ಐ.ಜಿ. ರಸ್ತೆಯ ಮೂಲಕ ಶ್ರೀರಾಮ ದೇವಸ್ಥಾನದ ವೃತ್ತದವರೆಗೆ ತಲುಪಿ ಅಲ್ಲಿಂದ ಬಸ್ ಮೂಲಕ ಕುಮಾರಗಿರಿಯ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯನ್ನು ತಲುಪಿತು. ನಂತರ ಕುಮಾರಗಿರಿಯಲ್ಲಿ ಹಾಲಿನ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿ, ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಸಲಾಯಿತು. ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.