ಮಲೆನಾಡು ರಾಸುಗಳ ಹಾಲು, ಸಗಣಿಯಲ್ಲಿ ಔಷಧೀಯ ಗುಣ
ಕ.ಪ್ರ.ವಾರ್ತೆ, ಮೂಡಿಗೆರೆ, ಜೂ.10
ಮಲೆನಾಡು ಭಾಗದ ರೈತರು ಚಾರಿತ್ರ್ಯಾತ್ಮಕವಾಗಿ ರಾಸುಗಳನ್ನು ಬೆಳೆಸಿದ ವಿಷಯಗಳಿದ್ದರೆ ನಮಗೆ ತಿಳಿಸಿ. ಅದನ್ನು ಸಂಶೋಧನೆ ಮೂಲಕ ತಿಳಿದು ಮುಂದಿನ ಪೀಳಿಗೆಗಳಿಗೆ ಉಳಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಬೆಂಗಳೂರಿನ ಡೀನ್ ವೈದ್ಯಕೀಯ ಕಾಲೇಜು ಮತ್ತು ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಜಿ. ಗೋವಿದಯ್ಯ ತಿಳಿಸಿದರು.
ತಾಲೂಕಿನ ದಾರದಹಳ್ಳಿ ಗ್ರಾಮದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಕರ್ನಾಟಕ ಜಾನುವಾರು ಅಭಿವೃದ್ಧಿ ಮಂಡಳಿಯ ಪ್ರಾಯೋಜಿತ ಕರ್ನಾಟಕ ಮಲೆನಾಡು ವಲಯ ದೇಶೀ ತಳಿಯ ಅಭಿವೃದ್ಧಿ ಮತ್ತು ಮೌಲ್ಯಮಾಪನ ಸಂಶೋಧನಾ ಯೋಜನೆಯಡಿ ಮಂಗಳವಾರ ನಡೆದ ರೈತರ ಸಮಾವೇಶ ಮತ್ತು ಮಲೆನಾಡು ವಲಯದ ರಾಸುಗಳ ವೈಜ್ಞಾನಿಕ ಸಾಕಾಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಲ್ನಾಡ್ ಗಿಡ್ಡ ಎಂಬ ಮಾಹಿತಿಯುಳ್ಳ ಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬೆಂಗಳೂರಿನ ಎನ್ಡಿಆರ್ಐನ ಸಂಘಟನಾ ಕಾರ್ಯದರ್ಶಿ ಮತ್ತು ಪ್ರಧಾನ ಸಂಶೋಧಕ ಡಾ. ಕೆ.ಪಿ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿ, 2007 ರಲ್ಲಿ ಜಾನುವಾರುಗಳ ಗಣತಿಯ ಪ್ರಕಾರ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡುಗು ಜಿಲ್ಲೆಗಳಲ್ಲಿ ಒಟ್ಟು 12.81.493 ತಳಿಗಳಿದ್ದವು. ಇವುಗಳಿಗೆ ಮಿಶ್ರತಳಿ ರಾಸುಗಳನ್ನು ಕಾಡುವ ಗಂಟಲು ಬೇನೆ, ಚಪ್ಪೆಬೇನೆ, ಕಾಲು ಬಾಯಿ ಜ್ವರ ಮುಂತಾದ ಸಾಕ್ರಾಮಿಕ ರೋಗಗಳು ಈ ತಳಿಗಳಲ್ಲಿ ಕಾಣಿಸಿಕೊಂಡರೂ ರೋಗದ ತೀವ್ರತೆ ಕಡಿಮೆ. ಅಲ್ಲದೆ ಕಡಿಮೆ ಆಹಾರ ಸೇವಿಸಿ ಹೆಚ್ಚು ಕೆಲಸ ನಿರ್ವಹಿಸುವ ಗುಣಗಳಿವೆ ಎಂದರು.
ಭಾರತದಲ್ಲಿಯೆ ಪ್ರಥಮ ಬಾರಿಗೆ ವೀರ್ಯನಳಿಕೆಯನ್ನು ಬೆಂಗಳೂರಿನ ಎನ್ಡಿಆರ್ಐನ ಮುಖ್ಯಸ್ಥ ಡಾ.ಸತೀಶ್ ಕುಲಕರ್ಣಿ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ದಾರದಹಳ್ಳಿ ಗ್ರಾ.ಪಂ. ಅಧ್ಯಕ್ಷ ರಘು ವಹಿಸಿದ್ದರು.
ರಂಜನ್ ಅಜಿತ್ಕುಮಾರ್, ವಿಜ್ಞಾನಿ ಚನ್ನಯ್ಯಸ್ವಾಮಿ, ಡಾ.ಜಯಶಂಕರ್, ಡಾ.ರಮೇಶ್, ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಮಾರ್, ರೈತ ಸಂಘದ ಪುಟ್ಟಸ್ವಾಮಿ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಕಾ.ದಾ. ಕೃಷ್ಣರಾಜ್ ಇದ್ದರು.