ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಡಾಂಬರ್ ತೆರವು ಕಾರ್ಯ ವಿಳಂಬಕ್ಕೆ ಆಕ್ಷೇಪ

Lingaraj Badiger
Updated On : 14 Jun 2014, 11:02 am

ಜಯಪುರ:  ಜಯಪುರದ ಮುಖ್ಯ ರಸ್ತೆ ಅಗಲೀಕರಣ, ಕಾಂಕ್ರೀಟೀಕರಣ ಕುರಿತು ಶುಕ್ರವಾರ ಜಯಪುರದ ಗ್ರಾಮ ಪಂಚಾಯ್ತಿ ಆವರಣದಲ್ಲಿ ಶಾಸಕ ಡಿ.ಎನ್. ಜೀವರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪ್ರಸ್ತುತ ನಡೆದಿರುವ ರಸ್ತೆ ಡಾಂಬರ್ ಕೀಳುವ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವ ಬಗ್ಗೆ, ರಸ್ತೆಯನ್ನು ಎರಡೂ ಬದಿಗಳಲ್ಲಿ ಏಕ ಕಾಲಕ್ಕೆ ಅಗೆದಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಸುದೀರ್ಘ ಚರ್ಚೆಯಾಗಿ, ಸಭೆಯಲ್ಲಿ ಹಾಜರಿದ್ದ ಕೊಪ್ಪದ ಪಿಡಬ್ಯೂಡಿ ಎಂಜಿನಿಯರ್ ಶಿವಣ್ಣ, ಸೆಕ್ಷನ್ ಆಫೀಸರ್ ರವಿಚಂದ್ರ ಹಾಗೂ ಗುತ್ತಿಗೆದಾರರಾದ ಇಕ್ಬಾಲ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡರು.
ಮೇ 6 ರಂದು ರಸ್ತೆಗೆ ಡಾಂಬರ್ ಕೀಳುವ ಕೆಲಸ ಪ್ರಾರಂಭವಾಗಿದೆ. 1 ತಿಂಗಳು ಕಳೆದರೂ ಡಾಂಬರ್ ಕೀಳುವ ಕೆಲಸ ಮುಗಿಯದಿದ್ದದಕ್ಕೆ ಶಾಸಕರು ಅಸಮಾಧಾನಗೊಂಡರು. ಅಂದಾಜು ಪಟ್ಟಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಮೇಲೆ ಕಬ್ಬಿಣದ ಸರಳನ್ನು ಮಧ್ಯದಲ್ಲಿ ಅಳವಡಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಸದರಿ ಅಂದಾಜು ಪ್ರತಿಯನ್ನು ಗುತ್ತಿಗೆದಾರರು ಇದುವರೆಗೆ ಪಡೆಯದೆ ಇದ್ದು, ಕಬ್ಬಿಣದ ಸರಳನ್ನು ಹಾಕುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದರು. ಆಗ ಶಾಸಕರು ಮತ್ತೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದೇ ಸಂದರ್ಭ ಮಾತನಾಡಿದ ಡಿ.ಎನ್. ಜೀವರಾಜ್, ರಸ್ತೆಯ ಕಾಮಗಾರಿಗೆ ಇದುವರೆಗೂ ಮರಳು ಹಾಗೂ ಜಲ್ಲಿಯನ್ನು ತಂದು ದಾಸ್ತಾನು ಮಾಡಿಲಾಗಿಲ್ಲ, ಮಳೆಗಾಲ ಪ್ರಾರಂಭವಾಗಿದೆ. ಮಳೆಯ ನೀರು ರಸ್ತೆಯಲ್ಲಿ ನಿಂತಾಗ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಕಾಮಗಾರಿ ಇನ್ನೂ ವಿಳಂಬ ಮಾಡದೆ ಕೂಡಲೇ ಮುಗಿಸಬೇಕು. ಕಾಮಗಾರಿ ಕುರಿತು ದೈನಂದಿನ ಪ್ರಗತಿ ವರದಿ ನೀಡಬೇಕೆಂದು ಹೇಳಿದರು.
ಸಭೆಯಲ್ಲಿ ಕೊಪ್ಪ ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್, ಉಪಾಧ್ಯಕ್ಷ ಪೂರ್ಣಚಂದ್ರ, ತಾಪಂ ಸದಸ್ಯ ಬೆಂಡೇಹಕ್ಲು ನಾರಾಯಣ ಹಾಗೂ ಪಳನಿ, ಜಿ.ಪಂ. ಸದಸ್ಯ ಕುಕ್ಕುಡಿಗೆ ರವೀಂದ್ರ, ಬಿಜೆಪಿ ಮುಖಂಡ ರಾಮಸ್ವಾಮಿ, ಜಯಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಶ್ರೀನಿವಾಸ್, ಉಪಾಧ್ಯಕ್ಷ ಸುಧಾಕರ್, ಜಯಪುರ ಗ್ರಾಮಸ್ಥರಿದ್ದರು.
ಸಭೆಯ ನಂತರ ಶಾಸಕರು, ಜಯಪುರ ಮುಖ್ಯ ರಸ್ತೆಯಲ್ಲಿ ತೆರಳಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು. ಸ್ವಾಗತ್ ಆಟೋ ಸರ್ಕಲ್ ಬಳಿ ವರ್ತಕರೊಂದಿಗೆ ರಸ್ತೆ ಅಗಲೀಕರಣದ ಕುರಿತು ಚರ್ಚಿಸಿ, ಅವರ ಅಭಿಪ್ರಾಯ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement