ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಲಮಿತಿಯೊಳಗೆ ಯೋಜನೆ ಅನುಷ್ಠಾನ

Vishwanath S
Updated On : 16 Jun 2014, 11:00 am

ತರೀಕೆರೆ: ಕಾಲಮಿತಿಯೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುವುದಾಗಿ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿಗಾರರೊಡನೆ ಭಾನುವಾರ ಮಾತನಾಡಿ, ಪಕ್ಷದ ಹೈಕಮಾಂಡ್ ದೀರ್ಘವಾಗಿ ಯೋಚಿಸಿ ಈ ಸ್ಥಾನ ನೀಡಿದೆ. ಎಲ್ಲ ಯೋಜನೆಗಳು ಈ ವ್ಯಾಪ್ತಿಗೆ ಬರುತ್ತದೆ. ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುವುದು, ನಿರ್ದಿಷ್ಟಪಡಿಸಿದ ಅವಧಿಯೊಳಗೆ ರಾಜ್ಯದ ಜನತೆಗೆ ಯೋಜನೆಯ ಫಲ ದೊರಕಬೇಕು ಎನ್ನುವುದಕ್ಕೆ ಆದ್ಯತೆ ನೀಡಲಾಗುವುದು. ಕೇಂದ್ರದ ಸಹಾಯ ಅತ್ಯಗತ್ಯವಾಗಿರುತ್ತದೆ.
ಯೋಜನಾ ಇಲಾಖೆ ಪಕ್ಷಾತೀತವಾಗಿರುತ್ತದೆ. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಯಶಸ್ಸು ಸಾಧಿಸುತ್ತೇನೆ ಎನ್ನುವ ಪೂರ್ಣ ವಿಶ್ವಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಂತನೆಯನ್ನು ರಾಜ್ಯದ ಜನತೆಗೆ ತಲುಪಿಸುತ್ತೇನೆ ಎಂದು ತಿಳಿಸಿದ ಅವರು, ರಾಜ್ಯದ ಲೋಕಸಭಾ ಸದಸ್ಯರ ಮತ್ತು ರಾಜ್ಯಸಭಾ ಸದಸ್ಯರ ಸಹಕಾರ ಪಡೆದು ಯೋಜನೆಗಳನ್ನು ಸಕಾರಾತ್ಮಕವಾಗಿ ನಿರ್ವಹಿಸುತ್ತೇನೆ. ಜನತೆಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಮಾಜಿ ಪುರಸಭಾಧ್ಯಕ್ಷ ಎಚ್.ಯು. ಫಾರೂಕ್, ಇಮ್ತಿಯಾಜ್ ಅವರು ಯೋಜನಾ ಮಂಡಳಿ ಉಪಾಧ್ಯಕ್ಷರು ಸಿ.ಎಂ. ಇಬ್ರಾಹಿಂ ಅವರನ್ನು ಅಭಿನಂದಿಸಿದರು.
ಆಲೂಗಡ್ಡೆ: ತೋಟಗಾರಿಕೆ ಇಲಾಖೆ ಸೂಚನೆ
ತರೀಕೆರೆ: ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಈಗಾಗಲೇ ಚುರುಕುಗೊಂಡಿದೆ. ಲಿಂಗದಹಳ್ಳಿ, ಅಜ್ಜಂಪುರ, ಶಿವನಿ ಹೋಬಳಿ ಹೆಚ್ಚಿನ ಭಾಗದಲ್ಲಿ ಆಲೂಗಡ್ಡೆ ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಹದಗೊಳಿಸಿದ್ದಾರೆ.
ಜಿಲ್ಲೆಯ ಕೆಲವು ಭಾಗಗಳಲ್ಲಿ 3 ವರ್ಷಗಳಿಂದ ಆಲೂ ಬೆಳೆ ಅಂಗಮಾರಿ ರೋಗಕ್ಕೆ ತುತ್ತಾಗಿದ್ದು, ಈ ರೋಗದ ತೀವ್ರತೆಯಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ರೋಗ ಈ ವರ್ಷವೂ ಮರುಕಳಿಸುವ ಸಂಭವ ಇರುವುದರಿಂದ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಸಂದರ್ಭದಲ್ಲಿ ಆಲೂ ಬೆಳೆಗಾರರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತೋಟಗಾರಿಕೆ ಇಲಾಖೆ ರೈತರಲ್ಲಿ ಮನವಿ ಮಾಡಿದೆ.
ರೋಗ ನಿರೋಧಕ ತಳಿಗಳಾದ ಕುಪ್ರಿ, ಜ್ಯೋತಿ, ಕುಫ್ರಿ ಪುಕರಾಜ್ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮೊಳಕೆಯೊಡೆದ ಗೆಡ್ಡೆಗಳನ್ನು, ಇಲ್ಲವೆ ಕತ್ತರಿಸಿದ ಬೀಜದ ಗೆಡ್ಡೆಯ ಕಂದುಗಳನ್ನು ಮೇಲ್ಮುಖವಾಗಿರುವಂತೆ ತಗ್ಗು ಸಾಲುಗಳಲ್ಲಿ 20 ಸೆಂ.ಮೀ ಅಂತರದಲ್ಲಿ ನೆಟ್ಟು ಸಾಲುಗಳ ಮೇಲೆ 15 ಸೆಂ.ಮೀ ಎತ್ತರದ ದಿಂಡುಗಳನ್ನು ಮಾಡಿ ನೆಟ್ಟಗಿಡಗಳನ್ನು ಮುಚ್ಚಬೇಕು.
ಶಿಫಾರಸು ಮಾಡಿದ ರಸ ಗೊಬ್ಬರಗಳಲ್ಲಿ ಶೇ.50 ರಷ್ಟು ಸಾರಜನಕ ಮತ್ತು ಪೂರ್ಣ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್‌ನ್ನು ಬಿತ್ತನೆಗೆ ಮುನ್ನ ಕೊಡಬೇಕು. ಬಿತ್ತನೆಯಾದ 30 ದಿನಗಳ ನಂತರ
ಉಳಿಕೆ ಶೇ.50 ರಷ್ಟು ಸಾರಜನಕ ಮೇಲುಗೊಬ್ಬರವಾಗಿ ಕೊಡಬೇಕು. ಬೀಜದ ಆಲೂಗೆಡ್ಡೆಗಳನ್ನು ಖರೀದಿಸಿದ ಸಂಸ್ಥೆಗಳಿಂದ ಕಡ್ಡಾಯವಾಗಿ ರಸೀತಿ ಪಡೆಯತಕ್ಕದ್ದು
ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅಗತ್ಯ: ರಂಭಾಪುರಿ ಶ್ರೀ
ಬಾಳೆಹೊನ್ನೂರು: ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅಗತ್ಯವಾಗಿದ್ದು, ಆದರ್ಶ ಮೌಲ್ಯಗಳ ಸಂರಕ್ಷಣೆ ಮತ್ತು ರಾಷ್ಟ್ರೀಯ ಮನೋಭಾವನೆ ಬೆಳೆಯಲು ಅತ್ಯುತ್ತಮ ಶಿಕ್ಷಣ ಮುಖ್ಯ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ರಂಭಾಪುರಿ ಪೀಠದಲ್ಲಿ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ಮನುಷ್ಯ, ಇಂದು ಅಧಿಕಾರ, ಹಣದ ಬೆನ್ನು ಹತ್ತಿ ನಿಜವಾದ ಮೌಲ್ಯಯುತ ಜೀವನ ಮರೆಯುತ್ತಿದ್ದಾನೆ. ಬೆಳೆಯುವ ಮಕ್ಕಳಲ್ಲಿ ರಾಷ್ಟ್ರಪ್ರೇಮ, ವಿಶಾಲವಾದ ಮನೋಭಾವ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕಿ ಬಾಳುವ ವಿಚಾರದಲ್ಲಿ ಸ್ವಾಭಿಮಾನ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ರಾಷ್ಟ್ರದ ಅಮೂಲ್ಯ ಸಂಪತ್ತಾಗಿರುವ ಭವಿಷ್ಯತ್ತಿನ ಯುವ ಜನಾಂಗವನ್ನು ಸದೃಢ ಸ್ವಾಭಿಮಾನಿಗಳನ್ನಾಗಿ ರೂಪಿಸುವ ಅಗತ್ಯವಿದೆ ಎಂದರು.
ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ, ಶಾಲಾ ಮುಖ್ಯೋಪಾಧ್ಯಾಯ ಎಚ್.ಎಂ. ಸದಾನಂದ, ಶ್ರೀಪೀಠದ ಲೆಕ್ಕಾಧಿಕಾರಿ ಎಸ್.ಬಿ. ಸಂಕಪ್ಪನವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement