ಶೀಘ್ರ ಭದ್ರಾ ನೀರು: ಗೀತಾ
ಬೀರೂರು: ಕಡೂರು- ಬೀರೂರು ಅವಳಿ ಪಟ್ಟಣಗಳ ಮಹತ್ತರ ಯೋಜನೆಯಾದ ಭದ್ರಾ ಕುಡಿಯುವ ನೀರು ಸರಬರಾಜು ಪ್ರಾಯೋಗಿಕವಾಗಿ ನಡೆಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಲಭ್ಯವಾಗಲಿರುವ ನೀರನ್ನು ಊರಿನ ನಾಗರಿಕರಿಗೆ ಸಮರ್ಪಕವಾಗಿ ಎಲ್ಲಾ ವಾರ್ಡ್ಗಳಿಗೆ ಪೂರೈಸಲು ತಯಾರಿ ನಡೆಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷೆ ಗೀತಾ ಹೇಮಂತ್ ಹೇಳಿದ್ದಾರೆ.
ಭಾಗವತ್ ನಗರ ರಸ್ತೆ ಸಮಸ್ಯೆ ಪರಿಹಾರದ ಹಿನ್ನಲೆಯಲ್ಲಿ ಪುರಸಭಾ ಸದಸ್ಯರೊಂದಿಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ಯೋಜನೆಗಾಗಿ ಈಗಾಗಲೇ ಬರಪರಿಹಾರ ನಿಧಿಯಲ್ಲಿರುವ ರು. 30 ಲಕ್ಷ ಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುವುದು, ಈ ಸಂಬಂಧ ಎಲ್ಲಾ 23 ವಾರ್ಡ್ಗಳಲ್ಲಿ ಪೈಪ್ ಅಳವಡಿಕೆಗೆ ಸಂಬಂಧಿಸಿದ ಮಾಹಿತಿ ಪಡೆದಿದ್ದು, ಪೈಪ್ ಲೈನ್ ಅಳವಡಿಸುವ ಬಗ್ಗೆ ಸದಸ್ಯರುಗಳಿಂದ ಮಾಹಿತಿ ಕೋರಲಾಗಿದೆ. ಇದಕ್ಕಾಗಿ ಪುರಸಭಾ ವಿಶೇಷ ಸಭೆಯಲ್ಲಿ ಟೆಂಡರ್ ಪ್ರಕ್ರಿಯೆ ನಿರ್ವಹಿಸಿದ್ದು ಇನ್ನೂ 2 ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಎಸ್ಎಫ್ಸಿ ಹಾಗೂ ಸೂಕ್ತ ನಿರ್ವಹಣೆಗಾಗಿ ಬಿಡುಗಡೆಯಾಗುವ ಅನುದಾನದ ಒಟ್ಟು ರು. 1 ಕೋಟಿ, 7 ಲಕ್ಷದ ಕ್ರಿಯಾ ಯೋಜನೆ ರೂಪಿಸಿ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಿದರು.
ಭಾಗವತ್ ನಗರ ರಸ್ತೆ ನಿರ್ಮಾಣಕ್ಕೆ ತಮ್ಮ ಜಮೀನುಗಳನ್ನು ಬಿಟ್ಟು ಕೊಟ್ಟು ಉಪಕಾರ ಮಾಡಿದ ರೈತರ ಗುಣವನ್ನು ಎಲ್ಲಾ ಸದಸ್ಯರು ಮುಕ್ತ ಕಂಠದಿಂದ ಶ್ಲಾಘಿಸಿದರು. ಉಪ ವಿಭಾಗಾಧಿಕಾರಿಗಳು ಹಾಗೂ ಇನ್ನೀತರ ಅಧಿಕಾರಿಗಳ ಸಮ್ಮುಖದಲ್ಲಿ ಆಗಿರುವ ತೀರ್ಮಾನಕ್ಕೆ ಬದ್ದವಾಗಿ ಅವರ ಆದೇಶದಂತೆ ಮುಂದಿನ ದಿನಗಳಲ್ಲಿ ರೈತರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ವ್ಯಕ್ತಪಡಿಸಿದರು.
ಪುರಸಭೆ ಉಪಾಧ್ಯಕ್ಷ ಲೋಕೇಶಪ್ಪ ಮಾತನಾಡಿ, ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ನಿರ್ವಹಿಸಲಾಗುವ ವಿವಿಧ ಕಾಮಗಾರಿಗಳಿಗೆ ಆ ವಾರ್ಡ್ಗಳ ಸದಸ್ಯರ ಜವಾಬ್ದಾರಿ ಇದ್ದು ಗುತ್ತಿಗೆದಾರರ ಸಮ್ಮುಖದಲ್ಲಿ ಖುದ್ದು ಕಾಮಗಾರಿ ಪರಿಶೀಲಿಸಿ ಕಾಮಗಾರಿ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ಹೊರಬೇಕೆಂಬ ಸಲಹೆ ನೀಡಿದರು. ಪಟ್ಟಣದ ಸ್ಥಳೀಯ ಸಂಸ್ಥೆಯ ಆದಾಯ ಹೆಚ್ಚಿಸಿಕೊಂಡು ಅಭಿವೃದ್ಧಿ ಪಡಿಸಲು ಲಭ್ಯವಿರುವ ಜಾಗಗಳ ಸದ್ಬಳಕೆ ಮಾಡಿಕೊಂಡು ಈ ಬಗ್ಗೆ ಜಿಲ್ಲಾಧಿಕಾರಿಗೆ ಸಮರ್ಪಕ ಮಾಹಿತಿ ಸಲ್ಲಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸದಸ್ಯ ಮಾರ್ಗದ ಮಧು, ವಸಂತ ರಮೇಶ್, ಬಸವರಾಜ್, ರವಿಕುಮಾರ್, ಜಿಯಾವುಲ್ಲಾ, ಈಶ್ವರಪ್ಪ, ಅರ್ಜುನ್, ಮಂಜುನಾಥ್, ನಾಗರಾಜ್, ಎಂ.ಆರ್.ಎಚ್.ಎಸ್. ಜಿಲ್ಲಾಧ್ಯಕ್ಷ ಚಂದ್ರಶೇಖರ್, ಭಾಗವತ್ ನಗರ ನಿವಾಸಿಗಳ ಸಂಘದ ಅಧ್ಯಕ್ಷ ರವಿಶಂಕರ್ ಉಪಸ್ಥಿತರಿದ್ದರು.